ನವದೆಹಲಿ: ಹಿಂದೂಗಳ ಭಕ್ತಿ, ಶ್ರಂದ್ಧಾ ಕೇಂದ್ರ ಪವಿತ್ರ ಅಮರನಾಥ ಯಾತ್ರೆ ಜುಲೈ 3 ರಿಂದ ಆರಂಭವಾಗಲಿದೆ. ಲಕ್ಷಾಂತರ ಭಕ್ತರು ಹಿಮಾಲದ ದುರ್ಗಮ ದಾರಿಯಲ್ಲಿ ಪ್ರಯಾಣಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆ ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜ್ಯೇಷ್ಠ ಪೌರ್ಣಮಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಥಮ ಪೂಜೆಯನ್ನು ನೆರವೇರಿಸಿ, ಬಾಬಾ ಬರ್ಫಾನಿ ಯಾತ್ರೆಯನ್ನು ಉದ್ಘಾಟಿಸಿದ್ದಾರೆ.
ಅಮರನಾಥ ಯಾತ್ರೆಗೆ ಹೋಗಲು ಯೋಜಿಸಿದವರು ಕೆಲ ದಾಖಲೆಗಳನ್ನು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು. ಅಲ್ಲದೇ ಎತ್ತರದ ಪ್ರದೇಶಗಳಲ್ಲಿ ಹವಾಮಾನವು ಕೆಲವೇ ಸೆಕೆಂಡುಗಳಲ್ಲಿ ಬದಲಾಗುತ್ತದೆ. ಹೀಗಾಗಿ ಪ್ರಯಾಣದ ವೇಳೆ ಕೆಲ ವಸ್ತುಗಳು ಯಾತ್ರಿಕರ ಬಳಿ ಇರುವುದು ಅಗತ್ಯ.
ಚಳಿಯಿಂದ ರಕ್ಷಿಸುವ ಬೆಚ್ಚಗಿನ ಬಟ್ಟೆಗಳು: ಅಮರನಾಥದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಹಠಾತ್ ಆಗಿ ತೀವ್ರ ಕುಸಿತ ಕಾಣುತ್ತದೆ. ಆದ್ದರಿಂದ ಯಾತ್ರಿಕರ ಬಳಿ ಥರ್ಮಲ್ ಒಳ ಉಡುಪು ಉಣ್ಣೆ ಸ್ವೆಟರ್ ಹಾಗೂ ಕೈಗವಸುಗಳು, ಜಲನಿರೋಧಕ (Waterproof) ಅಥವಾ ವಿಂಡ್ ಬ್ರೇಕರ್ ಜಾಕೆಟ್, ಉಣ್ಣೆಯ ಟೋಪಿ, ಮಫ್ಲರ್ ಮತ್ತು ಹೆಚ್ಚುವರಿ ಉಣ್ಣೆಯ ಸಾಕ್ಸ್, ರೇನ್ ಕೋಟ್ ಈ ವಸ್ತುಗಳು ಇರುವುದು ಮುಖ್ಯ,
ಔಷಧಿಗಳ ಕಿಟ್: ಬಿಪಿ, ಮಧುಮೇಹ, ಆಸ್ತಮಾ ಅಥವಾ ಇತರ ದೀರ್ಘಕಾಲದ ಕಾಯಿಲೆಗಳಿಗೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವವರು ಸಾಕಷ್ಟು ಪ್ರಮಾಣದ ಬ್ಯಾಕಪ್ ಮಾತ್ರೆಗಳನ್ನು ಕೊಂಡೊಯ್ಯಬೇಕು. ಇದರೊಂದಿಗೆ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಸಾಮಾನ್ಯ ಜ್ವರ, ಮೈಕೈ ನೋವು, ವಾಂತಿ ಮತ್ತು ಗಾಯಗಳಿಗೆ ಬಳಸುವ ಮುಲಾಮುಗಳನ್ನು ಇಟ್ಟುಕೊಳ್ಳುವುದು ಅಗತ್ಯ.
ಈ ದಾಖಲೆಗಳು ಕಡ್ಡಾಯ: ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ದಾಖಲೆಗಳ ಹಾರ್ಡ್ ಕಾಪಿ ಮತ್ತು ಮೊಬೈಲ್‌ನಲ್ಲಿ ಡಿಜಿಟಲ್ ಪ್ರತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ಅಮರನಾಥ ಯಾತ್ರೆ ನೋಂದಣಿ ಚೀಟಿ
ಕಡ್ಡಾಯ ಆರೋಗ್ಯ ಪ್ರಮಾಣಪತ್ರ
ಆಧಾರ್ ಕಾರ್ಡ್ ಅಥವಾ ಇತರ ಮಾನ್ಯವಾದ ಸರ್ಕಾರಿ ಫೋಟೋ ಗುರುತಿನ ಚೀಟಿ
ತುರ್ತು ಸಂಪರ್ಕ ಸಂಖ್ಯೆಗಳ ಪಟ್ಟಿ
ಎತ್ತರದ ಬೆಟ್ಟಗಳ ಮೇಲೆ ಸೂರ್ಯನ ಕಿರಣಗಳ ತೀವ್ರತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸನ್ ಗ್ಲಾಸ್, ಸನ್‌ಸ್ಕ್ರೀನ್ ಲೋಶನ್ ಮತ್ತು ಲಿಪ್ ಬಾಮ್ ಬಳಸಿ. ಇದರೊಂದಿಗೆ ಟಾರ್ಚ್ ಲೈಟ್, ಪವರ್ ಬ್ಯಾಂಕ್, ಮೊಬೈಲ್ ಚಾರ್ಜರ್, ನೀರಿನ ಬಾಟಲ್, ಡ್ರೈ ಫ್ರೂಟ್ಸ್, ಎನರ್ಜಿ ಬಾರ್‌ಗಳು ಹಾಗೂ ಗ್ಲೂಕೋಸ್ ಪ್ಯಾಕೆಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಲುವುದು ಅಗತ್ಯ. ಇನ್ನು ದುರ್ಗಮ ಹಾದಿಯಲ್ಲಿ ಸಾಗುವಾಗ ಲಗೇಜ್ ತೂಕ ಕಡಿಮೆ ಇದ್ದಷ್ಟು ಪ್ರಯಾಣ ಸುಲಭವಾಗುತ್ತದೆ.
ಅಮರನಾಥ ಯಾತ್ರೆಯು ಸಮುದ್ರ ಮಟ್ಟದಿಂದ ಗಣನೀಯ ಎತ್ತರದಲ್ಲಿ ನಡೆಯುವುದರಿಂದ ಅಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಿರುತ್ತದೆ. ಇದು ದೈಹಿಕ ತೊಂದರೆಗಳನ್ನು ಉಂಟುಮಾಡಬಹುದು. ಆದ್ದರಿಂದ ಭಕ್ತರು ಈ ನಿಯಮಗಳನ್ನು ಪಾಲಿಸಬೇಕು. ಬೆಟ್ಟ ಹತ್ತುವಾಗ ವೇಗವಾಗಿ ನಡೆಯಬೇಡಿ, ನಿಧಾನವಾಗಿ ಮತ್ತು ಸ್ಥಿರವಾಗಿ ಪ್ರಯಾಣಿಸಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ನಿಯಮಿತವಾಗಿ ನೀರು ಕುಡಿಯುತ್ತಿರಿ. ನಿರಂತರವಾಗಿ ನಡೆಯುವ ಬದಲು, ಮಧ್ಯೆ ಮಧ್ಯೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಸ್ಥಳೀಯ ಆಡಳಿತ ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಉಸಿರಾಟದ ತೊಂದರೆ, ತಲೆತಿರುಗುವಿಕೆ ಅಥವಾ ಎದೆ ನೋವು ಮುಂತಾದ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಿ.

