ಕಳೆದ ಕೆಲವು ದಿನಗಳಿಂದ ಟಾಲಿವುಡ್ ಚಿತ್ರರಂಗದಲ್ಲಿ ತೀವ್ರ ಕುತೂಹಲ ಮತ್ತು ವಿವಾದಕ್ಕೆ ಕಾರಣವಾಗಿದ್ದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಿಗ್ ಬಜೆಟ್ ಸಿನಿಮಾ ‘ಪೆದ್ದಿ’ ಚಿತ್ರದ ಬಿಡುಗಡೆಯ ಹಾದಿ ಕೊನೆಗೂ ಸುಗಮವಾಗಿದೆ. ಚಿತ್ರಮಂದಿರಗಳ ಬಾಡಿಗೆ ಮತ್ತು ಶೇಕಡಾವಾರು ಲಾಭ ಹಂಚಿಕೆ ವಿಷಯವಾಗಿ ತೆಲಂಗಾಣ ಪ್ರದರ್ಶಕರ ಸಂಘ ಮತ್ತು ನಿರ್ಮಾಪಕರ ನಡುವೆ ಇದ್ದ ಬಿಕ್ಕಟ್ಟಿಗೆ ಮೆಗಾಸ್ಟಾರ್ ಚಿರಂಜೀವಿ ಅವರ ಮಧ್ಯಸ್ಥಿಕೆಯಿಂದಾಗಿ ಸುಖಾಂತ್ಯ ಸಿಕ್ಕಿದೆ. ಈ ಕುರಿತು ತೆಲಂಗಾಣ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರರಂಗದ ಪ್ರಮುಖ ಪ್ರದರ್ಶಕರು, ನಿರ್ಮಾಪಕರು ಮತ್ತು ವಿತರಕರು ಚಿರಂಜೀವಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಪ್ರದರ್ಶಕರ ಬೇಡಿಕೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿದ ಚಿರಂಜೀವಿ, ಚಿತ್ರರಂಗದ ಹಿತದೃಷ್ಟಿಯಿಂದ ಜುಲೈ 3 ರಿಂದ ಹೊಸ ಶೇಕಡಾವಾರು ಲಾಭ ಹಂಚಿಕೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಬಲವಾದ ಭರವಸೆ ನೀಡಿದರು. ಈ ಭರವಸೆಯ ಬೆನ್ನಲ್ಲೇ ತೆಲಂಗಾಣ ಚಿತ್ರಮಂದಿರಗಳ ಮಾಲೀಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದು, ಪೆದ್ದಿ ಚಿತ್ರವನ್ನು ಈಗ ಚಾಲ್ತಿಯಲ್ಲಿರುವ ಹಳೆಯ ಬಾಡಿಗೆ ಪದ್ಧತಿಯಲ್ಲೇ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಈ ಸಮಸ್ಯೆಯನ್ನು ಕಳೆದ ಒಂದು ವರ್ಷದಿಂದ ಮುಂದೂಡುತ್ತಾ ಬಂದಿತ್ತು ಎಂದು ಪ್ರದರ್ಶಕರು ಅಸಮಾಧಾನ ಹೊರಹಾಕಿದ್ದರು. ಆದರೆ ಚಿರಂಜೀವಿ ಅವರ ಹಸ್ತಕ್ಷೇಪದ ನಂತರ ನೂತನ ಸಮಿತಿಯು ಜೂನ್ 30 ರೊಳಗೆ ಈ ಸಮಸ್ಯೆಗೆ ಸಂಪೂರ್ಣ ಮತ್ತು ಅಂತಿಮ ಪರಿಹಾರವನ್ನು ಕಂಡುಕೊಳ್ಳಲು ಸಮ್ಮತಿಸಿದೆ. ಅಲ್ಲಿಯವರೆಗೆ ಚಿತ್ರಮಂದಿರಗಳ ಹಳೆಯ ಬಾಡಿಗೆ ಪದ್ಧತಿಯೇ ಮುಂದುವರಿಯಲಿದ್ದು, ಜುಲೈ 3 ರಿಂದ ಹಳೆಯ ಬಾಡಿಗೆ ಸಿಸ್ಟಮ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎಲ್ಲಾ ಹೊಸ ಸಿನಿಮಾಗಳನ್ನು ಶೇಕಡಾವಾರು ಹಂಚಿಕೆ ಮಾದರಿಯಲ್ಲೇ ಪ್ರದರ್ಶಿಸಲಾಗುವುದು ಎಂದು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ವಿಎಲ್ ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ. ಈಗಾಗಲೇ ಚಿತ್ರತಂಡ ಮುಂಬೈ, ಭೋಪಾಲ್ ಮತ್ತು ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ನಗರಗಳಲ್ಲಿ ಪ್ರಚಾರ ನಡೆಸಲು ಯೋಜಿಸಿದೆ. ಚಿತ್ರರಂಗದ ಆಂತರಿಕ ಕಲಹ ತಿಳಿಯಾಗಿದ್ದರಿಂದ ರಾಮ್ ಚರಣ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

