ಇತ್ತೀಚಿನ ದಿನಗಳಲ್ಲಿ ಗೇಮ್ ಚೇಂಜರ್, ದೇವರ, ಸ್ಕಂದ ಮತ್ತು ಕೋಟಬೊಮ್ಮಾಲಿ ಪಿಎಸ್ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಶ್ರೀಕಾಂತ್, ಈಗ ಮತ್ತೆ ನಾಯಕ ನಟನಾಗಿ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ. ಜಿ ನಾಗೇಶ್ವರ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮಿಷ್ಟರ್ ಮಿಡಲ್‌ಕ್ಲಾಸ್’ ಚಿತ್ರದಲ್ಲಿ ಶ್ರೀಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸೀಮಾ ಶಾಸ್ತ್ರಿ, ಸೀಮಾ ಟಪಕಾಯ್ ಮತ್ತು ಈಡೋ ರಕಂ ಆಡೋ ರಕಂ ನಂತಹ ಪಕ್ಕಾ ಕಾಮಿಡಿ ಎಂಟರ್‌ಟೈನರ್ ಚಿತ್ರಗಳನ್ನು ನೀಡಿದ ಖ್ಯಾತಿ ಈ ನಿರ್ದೇಶಕರಿಗಿದೆ.
ಈ ಚಿತ್ರದಲ್ಲಿ ಶ್ರೀಕಾಂತ್ ಅವರಿಗೆ ಜೋಡಿಯಾಗಿ ಜನಪ್ರಿಯ ನಟಿ ಲಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ಈ ಸಿನಿಮಾದಲ್ಲಿ ವೆಂಕಟೇಶ್ವರ ಸ್ವಾಮಿಯ ವಿಶಿಷ್ಟ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದೆ. ಪ್ರಸಿದ್ಧ ಚಲನಚಿತ್ರ ಜೋಡಿಯಾದ ಎಸ್‌ವಿ ಕೃಷ್ಣಾರೆಡ್ಡಿ ಮತ್ತು ಕೆ ಅಚ್ಚಿರೆಡ್ಡಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಟೀಸರ್ ಲಾಂಚ್ ವೇಳೆ ಮಾತನಾಡಿದ ನಟ ಶ್ರೀಕಾಂತ್, ಸುದೀರ್ಘ ಬಿಡುವಿನ ನಂತರ ಹೀರೊ ಆಗಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಕನೆಕ್ಟ್ ಆಗುವಂತಹ ಸಿನಿಮಾದಲ್ಲಿ ನಟಿಸಿ ಹಲವು ವರ್ಷಗಳೇ ಕಳೆದಿದ್ದವು. ಕಮಲಾಕರ್ ಅವರು ಈ ಕಥೆ ಹೇಳಿದ ತಕ್ಷಣ ನಾನು ಒಪ್ಪಿಕೊಂಡೆ, ಅದರಲ್ಲೂ ನಾಗೇಶ್ವರ ರೆಡ್ಡಿ ಅವರ ನಿರ್ದೇಶನ ಎಂದಾಗ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತು. ಶೂಟಿಂಗ್‌ನ ಪ್ರತಿಯೊಂದು ಕ್ಷಣವನ್ನು ನಾನು ಆನಂದಿಸಿದ್ದೇನೆ ಎಂದು ಹೇಳಿದ್ದಾರೆ.
ಹಳೆಯ ದಿನಗಳನ್ನು ನೆನಪಿಸಿಕೊಂಡ ಶ್ರೀಕಾಂತ್, ನಟಿ ಲಯ ಜೊತೆಗೆ ಈ ಹಿಂದೆ ‘ಸ್ವರಾಭಿಷೇಕಂ’ ನಂತಹ ಹಲವು ನೆನಪಿನಲ್ಲುಳಿಯುವ ಸಿನಿಮಾಗಳನ್ನು ಮಾಡಿದ್ದೇನೆ. ಅವರು ಅಂದು ಹೇಗೆ ಕಾಣಿಸುತ್ತಿದ್ದರೋ ಇಂದಿಗೂ ಹಾಗೇ ಇದ್ದಾರೆ, ಅವರೊಂದಿಗೆ ಮತ್ತೆ ನಟಿಸುತ್ತಿರುವುದು ಖುಷಿ ತಂದಿದೆ. ಇನ್ನು ರಾಜೇಂದ್ರ ಪ್ರಸಾದ್ ಅವರು ದೇವಸ್ಥಾನದ ದೇವರ ಪಾತ್ರವನ್ನು ಅತ್ಯಂತ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಮಾಡಿದ್ದಾರೆ. ಡೈಮಂಡ್ ರತ್ನಬಾಬು ಈ ಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆ ಬರೆದಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನೀಡಿದ್ದು, ಚಂದು ಮತ್ತು ಜಿಕೆ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸುನಿಲ್, ವೆನ್ನೆಲ ಕಿಶೋರ್, ರಘು ಬಾಬು ಮತ್ತು ಅಲಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು, ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.

