ಪ್ರಭಾಸ್ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ಭಾಗ 2ರ ಶೂಟಿಂಗ್ ಹೈದರಾಬಾದ್‌ನಲ್ಲಿ ಗುಟ್ಟಾಗಿ ಸಾಗುತ್ತಿದೆ. ಈಗಾಗಲೇ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರನ್ನೊಳಗೊಂಡ ಪ್ರಮುಖ ದೃಶ್ಯಗಳ ಎರಡು ಶೆಡ್ಯೂಲ್ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಸಿನಿಮಾಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ನಿರ್ವಹಿಸಿದ್ದ ಸುಮತಿ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಬೇರೆಯದೇ ಆದ ಒಂದು ರಹಸ್ಯ ಪಾತ್ರವನ್ನು ಅವರು ಪೋಷಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಆಲಿಯಾ ಭಟ್ ಅವರ ಕೆಲವು ದೃಶ್ಯಗಳ ಚಿತ್ರೀಕರಣ ಕೂಡ ಮುಗಿದಿದ್ದು, ಚಿತ್ರತಂಡ ಈ ವಿಷಯವನ್ನು ಎಲ್ಲಿಯೂ ಲೀಕ್ ಆಗದಂತೆ ಭಾರಿ ಗೌಪ್ಯತೆ ಕಾಯ್ದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ಸೀಕ್ವೆಲ್‌ನಲ್ಲಿ ಸುಮತಿ ಎಂಬ ಮುಖ್ಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಚಿತ್ರವನ್ನು ವೈಜಯಂತಿ ಮೂವೀಸ್ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸುತ್ತಿದೆ. ಮೊದಲ ಭಾಗಕ್ಕೆ ಹಿನ್ನೆಲೆ ಸಂಗೀತದ ಮೂಲಕ ಧೂಳೆಬ್ಬಿಸಿದ್ದ ಸಂತೋಷ್ ನಾರಾಯಣನ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.

