ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗನ ಮಗ (grandnephew) ಸತ್ಯಕಿ ಸಾವರ್ಕರ್ ಅವರು ಸೋಮವಾರ (ಜೂನ್ 15) ಪುಣೆಯ ವಿಶೇಷ MP/MLA ನ್ಯಾಯಾಲಯದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿರುವ ಸತ್ಯಕಿ ಸಾವರ್ಕರ್, ಬ್ರಿಟಿಷ್ ಸರ್ಕಾರದ ಬಳಿ ಸಾವರ್ಕರ್ ಅವರು ತಮ್ಮ ಶಿಕ್ಷೆ ಕಡಿತಗೊಳಿಸುವಂತೆ 10 ಬಾರಿ ಕ್ಷಮಾದಾನ ಅರ್ಜಿ (Mercy Petition) ಸಲ್ಲಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರ ಮುಂದೆ ನಡೆದ ಪ್ರತಿಪ್ರಶ್ನೆಯಲ್ಲಿ, ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸತ್ಯಕಿ ಸಾವರ್ಕರ್, “ಸಾವರ್ಕರ್ ಅವರು 10 ಬಾರಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂಬುದು ಸತ್ಯ” ಎಂದು ಒಪ್ಪಿಕೊಂಡರು.
ಇದೇ ವೇಳೆ, “ಅದೇ ಕಾಲಘಟ್ಟದ ಕ್ರಾಂತಿಕಾರಿಗಳಾದ ಶಿವರಾಮ್ ರಾಜಗುರು, ಬಟುಕೇಶ್ವರ್ ದತ್ ಮತ್ತು ಅಶ್ಫಾಕುಲ್ಲಾ ಖಾನ್. ಅವರು ಬ್ರಿಟಿಷರ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಿರಲಿಲ್ಲ. ಸಾವರ್ಕರ್ ಅವರಿಗೆ ಶಿಕ್ಷೆ ವಿಧಿಸಿದ ಮೊದಲ ತಿಂಗಳಲ್ಲೇ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು” ಎಂದು ಹೇಳಿದರು.ಸಾವರ್ಕರ್ ಅವರನ್ನು ಅಂಡಮಾನ್‌ಗೆ ಕಳುಹಿಸುವ ಮೊದಲುವೇ ಗದರ ಸಂಘಟನೆಯೊಂದು ಪ್ರಕಟಿಸುತ್ತಿದ್ದ ಪತ್ರಿಕೆಯಲ್ಲಿ ಅವರಿಗೆ ‘ವೀರ್’ ಎಂಬ ಬಿರುದು ನೀಡಲಾಗಿತ್ತು ಎಂದು ಸತ್ಯಕಿ ತಿಳಿಸಿದರು.
ಇನ್ನೊಂದೆಡೆ, ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಅವರು ಬ್ರಿಟಿಷ್ ಸರ್ಕಾರಕ್ಕೆ ಯುದ್ಧ ಕೈದಿಗಳಂತೆ ಪರಿಗಣಿಸುವಂತೆ ಮನವಿ ಸಲ್ಲಿಸಿದ್ದರೂ, ಯಾವುದೇ ರಿಯಾಯಿತಿ ಅಥವಾ ಕ್ಷಮಾದಾನವನ್ನು ನಿರಾಕರಿಸಿದ್ದರು ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಸತ್ಯಕಿ ಹೇಳಿದರು.“ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಅವರು ತಮ್ಮ ಸಿದ್ಧಾಂತಗಳು ಹಾಗೂ ತತ್ವಗಳಿಗೆ ಕೊನೆಯವರೆಗೂ ಬದ್ಧರಾಗಿದ್ದರು. ಬ್ರಿಟಿಷರೊಂದಿಗೆ ವ್ಯವಹರಿಸುವಾಗಲೂ ಅವರು ತಮ್ಮ ನಿಲುವುಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿರಲಿಲ್ಲ ಎಂಬುದು ನನಗೆ ತಿಳಿದಿದೆ” ಎಂದು ಸತ್ಯಕಿ ಸಾವರ್ಕರ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

