ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ವೇಗದ ಬೌಲರ್ ಆಕಿಬ್ ನಬಿ ಇಂಗ್ಲೆಂಡ್‌ನ ಪ್ರಖ್ಯಾತ ಕೌಂಟಿ ತಂಡವಾದ ಸರ್ರೆ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಮೊದಲ ಡಿವಿಷನ್‌ನಲ್ಲಿ ಅವರು ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ತಮ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದ್ದಾರೆ.
ಮೂಲಗಳ ಪ್ರಕಾರ ಆಕಿಬ್ ನಬಿ ಮೂರು ಪಂದ್ಯಗಳಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ ಯಾರ್ಕ್‌ಷೈರ್, ಸಸೇಕ್ಸ್ ಮತ್ತು ಗ್ಲಾಮೋರ್ಗನ್ ವಿರುದ್ಧದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ನ ವೇಗ ಹಾಗೂ ಸ್ವಿಂಗ್‌ಗೆ ಪೂರಕವಾದ ವಾತಾವರಣದಲ್ಲಿ ಬೌಲಿಂಗ್ ಅನುಭವ ಪಡೆಯುವುದು ಅವರಿಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ಸಹಕಾರಿಯಾಗಲಿದೆ.
ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿದ್ದರೂ 25 ವರ್ಷದ ಆಕಿಬ್ ನಬಿಗೆ ಪದಾರ್ಪಣೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ವಿದೇಶಿ ನೆಲದಲ್ಲಿ ಭಾರತ ತಂಡವು ಬಲವಾದ ವೇಗದ ಬೌಲಿಂಗ್ ಪಡೆ ನಿರ್ಮಿಸಲು ಯೋಜನೆ ರೂಪಿಸುತ್ತಿರುವುದರಿಂದ ಆಕಿಬ್ ಅವರಿಗೆ ಈ ಕೌಂಟಿ ಅನುಭವ ಅತ್ಯಂತ ಪ್ರಮುಖವೆನಿಸಿದೆ. ಕೇವಲ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವೂ ಇವರಿಗಿರುವುದರಿಂದ ಆಲ್ರೌಂಡರ್‌ಗಳಿಗೆ ಆದ್ಯತೆ ನೀಡುವ ಕೋಚ್ ಗೌತಮ್ ಗಂಭೀರ್ ಅವರ ಗಮನ ಸೆಳೆಯಲು ಇದು ಸೂಕ್ತ ವೇದಿಕೆಯಾಗಿದೆ.
ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಆಕಿಬ್ ನಬಿ 12.56ರ ಅತ್ಯುತ್ತಮ ಸರಾಸರಿಯಲ್ಲಿ 60 ವಿಕೆಟ್ ಕಬಳಿಸಿ ಸರಣಿಯ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರ ತಂಡವು ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಎತ್ತಿಹಿಡಿಯುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಇದೀಗ ಇಂಗ್ಲೆಂಡ್ ಪರಿಸರದಲ್ಲಿ ತ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಮ್ಯಾಜಿಕ್ ಮಾಡಲು ಅವರು ಸಜ್ಜಾಗಿದ್ದಾರೆ.
“>

