ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಮುಂಬರುವ ಸಿನಿಮಾಗಳ ಪಟ್ಟಿಗೆ ಮತ್ತೊಂದು ಕುತೂಹಲಕಾರಿ ಯೋಜನೆ ಸೇರ್ಪಡೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ನಟ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ನಂತರ ಅವರು ಆರ್ ಬಲ್ಕಿ ನಿರ್ದೇಶನದ ಕೀ ಅಂಡ್ ಕಾ ಸಿನಿಮಾದ ಎರಡನೇ ಭಾಗದಲ್ಲಿ ಪ್ರಮುಖ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ ಚಿತ್ರತಂಡವು ಮೊದಲ ಭಾಗದ ಕಥೆಯನ್ನು ಮುಂದುವರಿಸುವ ಬದಲಿಗೆ ಹೊಸ ಕಥಾಹಂದರದೊಂದಿಗೆ ಈ ಹೊಸ ಚಿತ್ರವನ್ನು ರೂಪಿಸಲು ಯೋಜಿಸುತ್ತಿದೆ. ಈ ಪಾತ್ರಕ್ಕಾಗಿ ಕಿಯಾರಾ ಅವರನ್ನು ಸಂಪರ್ಕಿಸಲಾಗಿದ್ದು ಅವರು ಕೂಡ ಯೋಜನೆಯಲ್ಲಿ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೆ ಯಾವುದೇ ಅಧಿಕೃತ ಒಪ್ಪಂದಕ್ಕೆ ಸಹಿ ಬಿದ್ದಿಲ್ಲ. ಇನ್ನು ನಾಯಕ ನಟನ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಮುಖ ಪಾತ್ರಧಾರಿಗಳ ಹೆಸರುಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
ಪ್ರಸ್ತುತ ಈ ಸಿನಿಮಾ ಚಿತ್ರಕಥೆ ಬರವಣಿಗೆ ಹಾಗೂ ಪೂರ್ವ ಸಿದ್ಧತೆಯ ಹಂತದಲ್ಲಿದೆ. ಎಲ್ಲವೂ ಯೋಜನೆಯಂತೆ ಸಾಗಿದರೆ 2026ರ ಕೊನೆಯ ವೇಳೆಗೆ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಆದರೆ ನಿರ್ದೇಶಕರು ನಿರ್ಮಾಣ ಸಂಸ್ಥೆ ಹಾಗೂ ಬಿಡುಗಡೆಯ ದಿನಾಂಕದ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
2016ರಲ್ಲಿ ತೆರೆಕಂಡಿದ್ದ ಕೀ ಅಂಡ್ ಕಾ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಮಾಜದಲ್ಲಿ ಗಂಡು ಮತ್ತು ಹೆಣ್ಣಿನ ಸಾಂಪ್ರದಾಯಿಕ ಜವಾಬ್ದಾರಿಗಳನ್ನು ಬದಲಾಯಿಸಿ ವಿಭಿನ್ನವಾಗಿ ನಿರೂಪಿಸಲಾಗಿದ್ದ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಈಗ ಮೂಡಿಬರಲಿರುವ ಹೊಸ ಭಾಗದಲ್ಲೂ ಸಹ ಕುಟುಂಬ ವ್ಯವಸ್ಥೆ ಹಾಗೂ ಲಿಂಗ ಸಮಾನತೆಯ ವಿಚಾರಗಳನ್ನೇ ಹೊಸ ಕಥೆಯೊಂದಿಗೆ ತೋರಿಸಲು ನಿರ್ಮಾಪಕರು ಯೋಜಿಸಿದ್ದಾರೆ.

