ಬೆಂಗಳೂರು: ರಾಜ್ಯದ 1642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೃತಕ ಬುದ್ಧಿಮತ್ತೆ(ಎಐ) ವಿಷಯ ಭೋದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು(ಎನ್.ಎ.ಎಸ್.ಕ್ಯೂ.ಎಫ್) ತೃತೀಯ ಭಾಷೆಗೆ ಪರ್ಯಾಯವಾಗಿ ವಿಷಯ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ಸದ್ಯ ಆಟೋ ಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್, ಐಟಿ, ಐಟಿಇಎಸ್, ರಿಟೇಲ್, ಬ್ಯೂಟಿ ಅಂಡ್ ವೆಲ್ ನೆಸ್, ಅಪೇರಲ್ ಅಂಡ್ ಮೇಡ್ ಆಪ್ ನಂತಹ ಉದ್ಯೋಗ ಆಧಾರಿತ ವಿಷಯಗಳು ಎನ್.ಎಸ್.ಕ್ಯೂ.ಎಫ್.ನಲ್ಲಿವೆ.
ಇದೀಗ ರಿಟೇಲ್, ಬ್ಯೂಟಿ ಅಂಡ್ ವೆಲ್ ನೆಸ್, ಅಪೇರಲ್ ಅಂಡ್ ಮೇಡ್ ಆಪ್ ವಿಷಯಗಳಿಗೆ ಕೊಕ್ ನೀಡಿ ಎಐ ಬೋಧಿಸಲು ತೀರ್ಮಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಎನ್.ಎಸ್.ಕ್ಯೂ.ಎಫ್.ಗಾಗಿ ಹೊಸದಾಗಿ ಆಯ್ಕೆಯಾದ 1180 ಶಾಲೆಗಳು, 2024-25 ಮತ್ತು 2025-26ನೇ ಸಾಲಿನಲ್ಲಿ ಅನುಮೋದನೆಗೊಂಡ 381 ಶಾಲೆಗಳು ಮತ್ತು 81 ಸಿಂಗಲ್ ಸೆಕ್ಟರ್ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ಪರಿಚಯವಾಗಲಿದೆ.
ಬೋಧನೆಗೆ ಪ್ರತಿ ಶಾಲೆಗೆ ಒಬ್ಬರಂತೆ ಅತಿಥಿ ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಲಾಗಿದ್ದು, ಜುಲೈ 28ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆಯ್ಕೆಯಾದ ಶಿಕ್ಷಕರಿಗೆ ಆಗಸ್ಟ್ ಮೊದಲ ವಾರದಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಇವರಿಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಗೌರವಧನ ನೀಡಲಾಗುವುದು ಎಂದು ಹೇಳಲಾಗಿದೆ.
ಚಿತ್ರಕೃಪೆ: ಎಐ

