ಬೆಂಗಳೂರು- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ’ ಇಲಾಖೆಗೆ ಸಾರ್ವಜನಿಕರಿಂದ ದೂರುಗಳ ಪ್ರವಾಹವೇ ಹರಿದುಬಂದಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಬಗೆಹರಿಸುವ ಉದ್ದೇಶದಿಂದ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಸಚಿವರು ಮತ್ತು ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕೆಂಬ ಕಟ್ಟುನಿಟ್ಟಿನ ಆದೇಶದನ್ವಯ ಈ ಅಭಿಯಾನವು ರಾಜ್ಯಾದ್ಯಂತ ತೀವ್ರಗೊಂಡಿದೆ.
ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಇದುವರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಒಟ್ಟು 25,782 ಪ್ರಕರಣಗಳು (23,524 ದೂರುಗಳು ಮತ್ತು 2,258 ಮನವಿಗಳು) ಅಧಿಕೃತವಾಗಿ ದಾಖಲಾಗಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 826, ಇಂಧನ ಇಲಾಖೆಯಲ್ಲಿ 489, ಲೋಕೋಪಯೋಗಿ ಇಲಾಖೆಯಲ್ಲಿ 338 ಹಾಗೂ ಸಾರಿಗೆ ಇಲಾಖೆಯಲ್ಲಿ 304 ಪ್ರಕರಣಗಳು ದಾಖಲಾಗಿವೆ. ಶಾಲಾ ಶಿಕ್ಷಣ, ಒಳಾಡಳಿತ, ಹಾಗೂ ಆರೋಗ್ಯ ಇಲಾಖೆಗಳಲ್ಲೂ ನೂರಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿದ್ದು, ಕೃಷಿ, ಜಲಸಂಪನ್ಮೂಲ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೂ ಅಹವಾಲುಗಳು ಬಂದಿವೆ.
ದಾಖಲಾದ ದೂರುಗಳ ಪೈಕಿ ಸಿಂಹಪಾಲು ಕಂದಾಯ, ವಸತಿ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೇ ಸಂದಿರುವುದು ಸ್ಪಷ್ಟವಾಗಿದೆ. ಭೂಮಿ ಒತ್ತುವರಿ, ಪಿತ್ರಾರ್ಜಿತ ಆಸ್ತಿ ಖಾತೆ ಬದಲಾವಣೆ, ನಿವೇಶನ ಹಾಗೂ ವಸತಿ ಹಂಚಿಕೆಯಂತಹ ಮೂಲಭೂತ ಸಮಸ್ಯೆಗಳೇ ಸಾರ್ವಜನಿಕರನ್ನು ಸದಾ ಕಾಡುತ್ತಿರುವುದಕ್ಕೆ ಈ ಅಂಕಿ-ಅಂಶಗಳು ಕನ್ನಡಿ ಹಿಡಿದಿವೆ. ಸಾರ್ವಜನಿಕರಿಂದ ಈ ಮಟ್ಟದಲ್ಲಿ ದೂರುಗಳು ದಾಖಲಾಗುತ್ತಿರುವುದರಿಂದ, ಇಲಾಖೆಯು ಇವುಗಳನ್ನು ಎಷ್ಟು ಶೀಘ್ರವಾಗಿ ವಿಲೇವಾರಿ ಮಾಡಲಿದೆ ಮತ್ತು ಜನಸಾಮಾನ್ಯರಿಗೆ ಯಾವ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಈಗ ಕಾದುನೋಡಬೇಕಾದ ಮುಖ್ಯ ವಿಷಯವಾಗಿದೆ.
ಮುಖ್ಯಮಂತ್ರಿಗಳ ಅಭಿಮತ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ್ಲಿಗಿಯಲ್ಲಿ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಂದ ಅಧಿಕಾರಿಗಳವರೆಗೆ ಅಲೆದಾಡುವ ಸ್ಥಿತಿ ಕೊನೆಗೊಳ್ಳಬೇಕು; ಸರ್ಕಾರವೇ ಜನರ ಬಳಿಗೆ ಹೋಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಹೊಸ ಇಲಾಖೆ, ಹಳೆಯ ಸಮಸ್ಯೆಗಳು?
ಹೊಸ ಇಲಾಖೆ, ಹಳೆಯ ಸಮಸ್ಯೆಗಳೇ?
‘ಪ್ರಜಾಸೇವಾ ಇಲಾಖೆ’ ಹೊಸದಾಗಿ ಅಧಿಕೃತ ರೂಪ ಪಡೆದಿದ್ದರೂ, ಸಾರ್ವಜನಿಕರ ದೂರುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಿ ಪರಿಹರಿಸುವ ವ್ಯವಸ್ಥೆ ರಾಜ್ಯದಲ್ಲಿ ಹಿಂದಿನಿಂದಲೂ ಇತ್ತು. ಕರ್ನಾಟಕ ಸರ್ಕಾರದ ಜನಸ್ಪಂದನ–iPGRS ವ್ಯವಸ್ಥೆ 2021ರಿಂದ ಕಾರ್ಯನಿರ್ವಹಿಸುತ್ತಿದ್ದು, 1902 ಸಹಾಯವಾಣಿ, ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ದೂರು ದಾಖಲಿಸುವ ಅವಕಾಶ ಹೊಂದಿದ್ದಾರೆ. 2023ರ ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ವರದಿಯಲ್ಲಿಯೂ ಕರ್ನಾಟಕದ iPGRS ವ್ಯವಸ್ಥೆಯನ್ನು ಸಾರ್ವಜನಿಕ ದೂರುಗಳ ನೋಂದಣಿ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಾಗಿ ಗುರುತಿಸಲಾಗಿದೆ.
2024–25ರ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿಯೂ iPGRS ಅಡಿಯಲ್ಲಿ 41 ಇಲಾಖೆಗಳು ಹಾಗೂ ಸಾವಿರಾರು ಯೋಜನೆ–ಸೇವೆಗಳು ಒಳಗೊಂಡಿದ್ದು, ಅಂದಿನವರೆಗೆ 2.12 ಲಕ್ಷಕ್ಕೂ ಹೆಚ್ಚು ದೂರುಗಳು ಸ್ವೀಕರಿಸಲ್ಪಟ್ಟಿದ್ದವು ಎಂದು ದಾಖಲಾಗಿದೆ.
ಇದೀಗ ಇದೇ ದೂರು ಪರಿಹಾರ ವ್ಯವಸ್ಥೆಯನ್ನು ‘ಪ್ರಜಾಸೇವಾ ಇಲಾಖೆ’ಯಡಿ ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಪ್ರಸ್ತುತ ಸರ್ಕಾರದ ಅಧಿಕೃತ iPGRS ಪೋರ್ಟಲ್‌ನಲ್ಲಿ 318,938 ಒಟ್ಟು ದೂರುಗಳು ದಾಖಲಾಗಿದ್ದು, 310,507 ದೂರುಗಳು ವಿಲೇವಾರಿಯಾಗಿವೆ ಎಂದು ತೋರಿಸುತ್ತಿದೆ; ಆದರೆ ಸಮಯಮಿತಿಯೊಳಗಿನ ವಿಲೇವಾರಿ ಪ್ರಮಾಣ 63.21% ಮತ್ತು ಧನಾತ್ಮಕ ಪ್ರತಿಕ್ರಿಯೆ 43.28% ಎಂದು ಪೋರ್ಟಲ್‌ನ ಅಂಕಿ-ಅಂಶಗಳು ಸೂಚಿಸುತ್ತವೆ
ದೂರುಗಳ ಸಂಖ್ಯಾತಿಯು
ಇಲಾಖೆಯ ಹೆಸರು ದೂರುಗಳು ಮನವಿಗಳು
ಕಂದಾಯ ಇಲಾಖೆ 8,385 628
ವಸತಿ ಇಲಾಖೆ 3,341 738
ನಗರಾಭಿವೃದ್ಧಿ ಇಲಾಖೆ 3,836 83
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 3,167 327
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1,344 79

