ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಬಿಜೆಪಿಯ ಮೇಯರ್ ಆಗಿ ವಿ.ವಿ.ರಾಜೇಶ್, ಉಪ ಮೇಯರ್ ಆಗಿ ಜಿ.ಎಸ್.ಆಶಾನಾಥ್ ಆಯ್ಕೆಯಾಗಿದ್ದಾರೆ. 2026ರ ವಿಧಾನಸಭೆ ಚುನಾವಣೆಗೂ ಮುನ್ನ ಕೇರಳ ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಶಕ್ತಿ ಬಂದಂತೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೇರಳ ಪ್ರವಾಸ ಕೈಗೊಂಡಿದ್ದರು. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೊಸದಾಗಿ ಆಯ್ಕೆಯಾದ ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಮತ್ತು ಪಕ್ಷದ ನಾಯಕತ್ವನ್ನು ಪ್ರಧಾನಿ ಮೋದಿ ಅಭಿನಂದಿಸಿದರು.
ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು. ಮೇಯರ್ ವಿ.ವಿ. ರಾಜೇಶ್ ಮತ್ತು ಉಪಮೇಯರ್ ಜಿ.ಎಸ್.ಆಶಾ ನಾಥ್ ಅವರನ್ನು ಅಭಿನಂದಿಸಿದ ಮೋದಿ, “ಈ ಗೆಲುವು ಯುಗ ನಿರ್ಮಾಣದ ಸಾಧನೆ, ಸಂತೋಷ ಮತ್ತು ಹೆಮ್ಮೆಯ ವಿಷಯ’ ಎಂದು ಹೇಳಿದ್ದಾರೆ.
ಭಾವುಕರಾದ ಜಿ.ಎಸ್.ಆಶಾ ನಾಥ್: ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮೇಯರ್ ವಿ.ವಿ.ರಾಜೇಶ್ ಅವರನ್ನು ತಬ್ಬಿಕೊಂಡು ಬೆನ್ನುತಟ್ಟಿ ಅಭಿನಂದಿಸಿದರು.
ಬಳಿಕ ವೇದಿಕೆ ಮೇಲಿದ್ದ ಉಪಮೇಯರ್ ಜಿ.ಎಸ್.ಆಶಾ ನಾಥ್ ನರೇಂದ್ರ ಮೋದಿ ಪಾದಮುಟ್ಟಿ ಆಶೀರ್ವಾದ ಪಡೆಯಲು ಮುಂದಾದರು. ಯಾರನ್ನು ಸಹ ಕಾಲಿಗೆ ಬೀಳಲು ಮೋದಿ ಬಿಡುವುದಿಲ್ಲ.
ಶುಕ್ರವಾರವೂ ಅದೇ ನಡೆಯಿತು. ಜಿ.ಎಸ್.ಆಶಾ ನಾಥ್ ಕಾಲಿಗೆ ಬೀಳಲು ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ತಡೆದರು. ಜಿ.ಎಸ್.ಆಶಾ ನಾಥ್ ಅವರ ಕೈ ಹಿಡಿದು ನರೇಂದ್ರ ಮೋದಿ ನಮಸ್ಕಾರ ಮಾಡಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಕುರಿತ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜಿ.ಎಸ್.ಆಶಾ ನಾಥ್, “”ಇದು ಕೇವಲ ಒಂದು ಫೋಟೋವಲ್ಲ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಅತ್ಯಂತ ಗೌರವದಿಂದ ನಾನು ಶಿರಬಾಗಿ ಅವರ ಪಾದಗಳನ್ನು ಮುಟ್ಟಿದಾಗ, ಅಧಿಕಾರದ ಉತ್ತುಂಗದಲ್ಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು, ಅಷ್ಟೇ ವಿನಮ್ರತೆಯಿಂದ ಅದನ್ನು ತಡೆದು ನಮಸ್ಕರಿಸಿದರು” ಎಂದು ಹೇಳಿದ್ದಾರೆ.
50 ಸೀಟುಗಳನ್ನು ಗೆದ್ದು ಜಯಭೇರಿ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದೆ. 101 ವಾರ್ಡ್‌ಗಳನ್ನು ಒಳಗೊಂಡಿರುವ ಪಾಲಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟ 50 ಸೀಟುಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಅಧಿಕಾರವನ್ನು ಪಡೆದಿದೆ.
ಈ ಹಿನ್ನಲೆಯಲ್ಲಿ ಶುಕ್ರವಾರ ಕೇರಳಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ನೂತನ ಮೇಯರ್ ಮತ್ತು ಉಪ ಮೇಯರ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವರ್ಷ ಕೇರಳ ವಿಧಾನಸಭೆ ಚುನಾವಣೆ ನಡೆಯುವ ಕಾರಣ ಪಾಲಿಕೆ ಚುನಾವಣೆ ಗೆಲುವು ಬಿಜೆಪಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಟೀಕೆಗಳನ್ನು ಮಾಡಿದರು. ಸಹಕಾರಿ ಬ್ಯಾಂಕ್ ಹಗರಣ, ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ಕಳ್ಳತನ ಪ್ರಕರಣಗಳನ್ನು ಪ್ರಸ್ತಾಪಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡುತ್ತದೆ ಎಂದು ಭರವಸೆ ಕೊಟ್ಟರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿ ಎಂದು ನರೇಂದ್ರ ಮೋದಿ ಕರೆ ನೀಡಿದರು. ಮಹಾನಗರ ಪಾಲಿಕೆ ಚುನಾವಣೆ ಗೆಲುವು ರಾಜ್ಯಾದ್ಯಂತ ಕಂಡುಬರುತ್ತಿರುವ ಬದಲಾವಣೆ ಸಂಕೇತ ಎಂದು ಬಣ್ಣಿಸಿದರು.

