ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ. ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ಸಾಕ್ಷ್ಯ ನುಡಿಯಲು ಹಾಗೂ ವಿಚಾರಣೆಗೆ ಹಾಜರಾಗಲು ನಟ ಸುದೀಪ್ ಅವರಿಗೆ ನ್ಯಾಯಾಲಯ ಸೂಚನೆ ನೀಡಿದ್ದು, ಅದರಂತೆ ಅವರು ಇಂದು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲಿದ್ದಾರೆ.
ಕೆಲವು ನಿರ್ಮಾಪಕರು ತಮ್ಮ ವಿರುದ್ಧ ಸಾರ್ವಜನಿಕವಾಗಿ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟ ಸುದೀಪ್ ಅವರು ಈ ಹಿಂದೆ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಈ ಪ್ರಕರಣ ಸುದೀರ್ಘ ಸಮಯದಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದು, ವಿಚಾರಣೆಯ ಭಾಗವಾಗಿ ಇಂದು ಸುದೀಪ್ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.
ಸಿನಿಮಾ ಕಾಲ್ ಶೀಟ್ ಕೊಡುವುದಾಗಿ ನಟ ಸುದೀಪ್ 9 ಕೋಟಿ ರೂ ಪಡೆದಿದ್ದರು ಎಂದು ನಿರ್ಮಾಪಕರು ಆರೋಪಿಸಿದ್ದರು.ಈ ಸಂಬಂಧ ಸುದೀಪ್ 2023 ರಲ್ಲಿ 7 ನೇ ಎಸಿಜೆಎಂ ಕೋರ್ಟ್ ನಲ್ಲಿ ನಿರ್ಮಾಪಕರಾದ ಎಂ ಎನ್ ಕುಮಾರ್ ಹಾಗೂ ಎಂ ಎನ್ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಸುದೀಪ್ ಆಗಮನ : ಬೆಳಗ್ಗೆಯಿಂದಲೇ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ನಟ ಸುದೀಪ್ ನ್ಯಾಯಾಲಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮಗಳ ಗಮನ ಈ ಪ್ರಕರಣದತ್ತ ನೆಟ್ಟಿದೆ. ಪ್ರಕರಣದ ವಿಚಾರಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ನ್ಯಾಯಾಲಯದ ಆದೇಶವೇನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಸುದೀಪ್ ಬ್ಯುಸಿ..!
ಬಿಲ್ಲಾ ರಂಗ ಬಾಷಾ : ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವು ಭವಿಷ್ಯದ (2209ನೇ ಇಸವಿ) ಕಲ್ಪನೆಯನ್ನು ಹೊಂದಿರುವ, ಭಾರಿ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇದರ ಚಿತ್ರೀಕರಣವು ಪ್ರಸ್ತುತ ಪ್ರಗತಿಯಲ್ಲಿದೆ.
ಕಿಚ್ಚ47: ‘ಮ್ಯಾಕ್ಸ್’ ಖ್ಯಾತಿಯ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಜೊತೆ ಸುದೀಪ್ ಮತ್ತೊಮ್ಮೆ ಕೈಜೋಡಿಸಿರುವ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಇದನ್ನು ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಿಸುತ್ತಿದೆ.
ಸುದೀಪ್ ಅವರ ನಿರ್ದೇಶನದ ಮೊದಲ ಚಿತ್ರ 2006 ರಲ್ಲಿ ಬಿಡುಗಡೆಯಾದ ‘ಮೈ ಆಟೋಗ್ರಾಫ್’ , 175 ದಿನಗಳನ್ನು ಪೂರೈಸಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅಂದಿನಿಂದ ಅವರು ‘ನಂ 73’, ‘ಶಾಂತಿ ನಿವಾಸ’ , ‘ವೀರ ಮದಕರಿ’ , ‘ಜಸ್ಟ್ ಮಾತ್ ಮಾತಲ್ಲಿ’ , ‘ಕೆಂಪೇಗೌಡ’ ಮತ್ತು ‘ಮಾಣಿಕ್ಯ’ ಮುಂತಾದ ಅನೇಕ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರಕ್ಕೂ ಅವರು ಚಿತ್ರಕಥೆ ಬರೆದಿದ್ದಾರೆ .

