ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಬಿಜೆಪಿ ಹಿರಿಯ ನಾಯಕಿ ಡಾ. ಸುಧಾ ಯಾದವ್ ಅವರು (ಅಕ್ಟೋಬರ್ 16) ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆದಿದ್ದು, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ಸುಧಾ ಯಾದವ್ ಅವರು ರಾಜ್ಯದ 20ನೇ ರಾಜ್ಯಪಾಲರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲೆ
ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಅವರು ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿ.ಎಸ್. ರಮಾದೇವಿ ಅವರು 1999ರಿಂದ 2002ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 12ರಂದು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದರು. ಅದರಂತೆ, ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಸುಧಾ ಯಾದವ್ ಅವರನ್ನು ನೇಮಿಸಲಾಗಿತ್ತು.
ಪ್ರಮಾಣವಚನಕ್ಕೂ ಮುನ್ನ ಹುತಾತ್ಮ ಯೋಧರಿಗೆ ನಮನ
ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ಸುಧಾ ಯಾದವ್ ಅವರು ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಲೋಕಭವನದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿರ್ಗಮಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನೂತನ ರಾಜ್ಯಪಾಲರಿಗೆ ಶುಭ ಹಾರೈಸಿದರು.
ಯಾರು ಈ ಡಾ. ಸುಧಾ ಯಾದವ್?
ಡಾ. ಸುಧಾ ಯಾದವ್ ಅವರು ಬಿಜೆಪಿಯ ಹಿರಿಯ ನಾಯಕಿಯಾಗಿದ್ದು, ಪಕ್ಷದ ಸಂಸದೀಯ ಮಂಡಳಿಯ ಸದಸ್ಯೆಯಾಗಿದ್ದಾರೆ. ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ 1999ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, 2004ರವರೆಗೆ ಸಂಸದೆಯಾಗಿ ಸೇವೆ ಸಲ್ಲಿಸಿದ್ದರು.
ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿರುವ ಅವರು, 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಬಿಎಸ್ಎಫ್ ಅಧಿಕಾರಿ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿ. ಪತಿಯ ಮರಣದ ಬಳಿಕ ರಾಜಕೀಯ ಪ್ರವೇಶಿಸಿದ ಅವರು, ಬಿಜೆಪಿ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಡಾ. ಸುಧಾ ಯಾದವ್ ಅವರು ಬಿಜೆಪಿಯ ಹಿರಿಯ ನಾಯಕಿಯಾಗಿದ್ದು, ಪಕ್ಷದ ಸಂಸದೀಯ ಮಂಡಳಿಯ ಸದಸ್ಯೆಯಾಗಿದ್ದಾರೆ. ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿರುವ ಅವರು, ಮಾಜಿ ಲೋಕಸಭಾ ಸಂಸದೆಯೂ ಆಗಿದ್ದಾರೆ.ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪತ್ನಿಯಾಗಿರುವ ಸುಧಾ ಯಾದವ್ ಅವರು ಸಾರ್ವಜನಿಕ ಜೀವನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಥಾವರ್ ಚಂದ್ ಗೆಹ್ಲೋಟ್ ಸ್ಥಾನಕ್ಕೆ ಸುಧಾ ಯಾದವ್
ಕರ್ನಾಟಕದ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್ ಅವರನ್ನು ನೂತನ ರಾಜ್ಯಪಾಲೆಯಾಗಿ ನೇಮಕ ಮಾಡಿದ್ದಾರೆ. ಅಕ್ಟೋಬರ್ 12ರಂದು ಈ ನೇಮಕಾತಿ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.

