ಸಂಜೆ ವೇಳೆ ಏನಾದರೂ ಖಾರವಾಗಿ ಮತ್ತು ಚಟಪಟ ಎನಿಸುವ ತಿಂಡಿ ತಿನ್ನಬೇಕು ಎನಿಸಿದರೆ ಅಚಾರಿ ಪನೀರ್ ಕಾತಿ ರೋಲ್ ಅತ್ಯುತ್ತಮ ಆಯ್ಕೆ. ಉಪ್ಪಿನಕಾಯಿಯ ಮಸಾಲೆಯಲ್ಲಿ ನೆನೆಸಿದ ಪನೀರ್ ತುಂಡುಗಳನ್ನು ಪರಾಟದೊಳಗೆ ಸುತ್ತಿ ತಯಾರಿಸುವ ಈ ಖಾದ್ಯವು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಹೋಟೆಲ್ ಶೈಲಿಯ ಈ ರೋಲ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
- ಪನೀರ್ – 400 ಗ್ರಾಂ
- ಅಚ್ಚ ಖಾರದ ಪುಡಿ – 1 ಚಮಚ
- ಅಚಾರಿ ಮಸಾಲಾ – 1 ಚಮಚ
- ಗರಂ ಮಸಾಲಾ – 1 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ನಿಂಬೆ ರಸ – 2 ಚಮಚ
- ಗಟ್ಟಿ ಮೊಸರು – ಅರ್ಧ ಚಮಚ
- ಸೋಂಪು, ಜೀರಿಗೆ, ಸಾಸಿವೆ ಮತ್ತು ಕರಿಜೀರಿಗೆ (Nigella seeds) – ತಲಾ 1 ಚಮಚ
- ಎಣ್ಣೆ – ಅಗತ್ಯವಿರುವಷ್ಟು
- ಈರುಳ್ಳಿ – 1 (ಉದ್ದಕ್ಕೆ ಹೆಚ್ಚಿದ್ದು)
- ಪರಾಟ – 2 ರಿಂದ 3
- ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
- ಮೊದಲಿಗೆ ಪನೀರ್ ತುಂಡುಗಳಿಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಒಂದು ಗಂಟೆ ಕಾಲ ನೆನೆಯಲು ಬಿಡಿ.
- ಒಂದು ಬಾಣಲೆಯಲ್ಲಿ ಜೀರಿಗೆ, ಸಾಸಿವೆ, ಸೋಂಪು ಮತ್ತು ಕರಿಜೀರಿಗೆಯನ್ನು ಹಾಕಿ ಲಘುವಾಗಿ ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಈ ಪುಡಿಗೆ ಸಾಸಿವೆ ಎಣ್ಣೆ, ಕಪ್ಪು ಉಪ್ಪು, ಅಚಾರಿ ಮಸಾಲಾ ಮತ್ತು ಉಳಿದ ಒಣ ಮಸಾಲೆಗಳನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
- ಈಗ ಈ ಮಸಾಲೆ ಪೇಸ್ಟ್ ಮತ್ತು ಮೊಸರನ್ನು ಮೊದಲೇ ನೆನೆಸಿಟ್ಟ ಪನೀರ್ ತುಂಡುಗಳಿಗೆ ಚೆನ್ನಾಗಿ ಹಚ್ಚಿ ಮತ್ತೆ ಅರ್ಧ ಗಂಟೆ ಇಡಿ. ನಂತರ ಈ ಪನೀರ್ ತುಂಡುಗಳನ್ನು ಓವನ್ನಲ್ಲಿ 7-8 ನಿಮಿಷ ಬೇಯಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ.
- ಒಂದು ತವಾ ಮೇಲೆ ಪರಾಟವನ್ನು ಬಿಸಿ ಮಾಡಿ, ಅದರ ಮೇಲೆ ಪುದೀನಾ ಚಟ್ನಿ ಹಚ್ಚಿ. ಅದರ ಮಧ್ಯಭಾಗದಲ್ಲಿ ಸಿದ್ಧಪಡಿಸಿದ ಪನೀರ್ ತುಂಡುಗಳನ್ನು ಇರಿಸಿ. ಮೇಲೆ ಹೆಚ್ಚಿದ ಈರುಳ್ಳಿ ಮತ್ತು ಸ್ವಲ್ಪ ನಿಂಬೆ ರಸವನ್ನು ಸಿಂಪಡಿಸಿ.
- ಪರಾಟವನ್ನು ರೋಲ್ ಮಾಡಿ ಅಂಚುಗಳನ್ನು ಒಂದು ಟೂತ್ಪಿಕ್ನಿಂದ ಭದ್ರಪಡಿಸಿ. ಈಗ ಬಿಸಿಬಿಸಿಯಾದ ಅಚಾರಿ ಪನೀರ್ ಕಾತಿ ರೋಲ್ ಸವಿಯಲು ಸಿದ್ಧ.

