ಚಿಕ್ಕಬಳ್ಳಾಪುರ:ರಾಷ್ಟ್ರೀಯ ಹೆದ್ದಾರಿ – 44ರಲ್ಲಿರುವ ಆರ್‌ಟಿಒ ಕಚೇರಿ ಬಳಿ ವಾಹನಗಳ ತಪಾಸಣೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಒಬ್ಬರು ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಂಭವಿಸಿದೆ.
ಮೃತರನ್ನು ಷಫೀವುಲ್ಲಾ (45) ಎಂದು ಗುರುತಿಸಲಾಗಿದೆ. ವಾಹನಗಳ ತಪಾಸಣೆ ಕಾರ್ಯದಲ್ಲಿದ್ದಾಗ ವೇಗವಾಗಿ ಬಂದ ಬೊಲೆರೋ ವಾಹನ ಲಾರಿಗೆ ಡಿಕ್ಕಿ ಹೊಡೆದು ಅಲ್ಲೇ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಷಫೀವುಲ್ಲಾ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಷಫೀವುಲ್ಲಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರ್‌ಟಿಒ ಸಿಬ್ಬಂದಿ ಷಫೀವುಲ್ಲಾ ಅವರನ್ನು ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಂಸ್ಥರಿಗೆ ಹಸ್ತಾಂತರಿಸಲಾಯಿತು. ಮೃತರ ಪತ್ನಿ, ಪುತ್ರ ಹಾಗೂ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ.
ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಂ ಗಾರ್ಡ್ ಷಫೀವುಲ್ಲಾ ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.

