ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19 ರಂದು ಬಿಹಾರದ ರಾಜ್ ಗಿರ್ ನಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.
ಹೊಸ ಕ್ಯಾಂಪಸ್ ನಲ್ಲಿ ಫಲಕವನ್ನು ಅನಾವರಣಗೊಳಿಸುವ ಮೂಲಕ ಮತ್ತು ಸಸಿಯನ್ನು ನೆಡುವ ಮೂಲಕ ಕ್ಯಾಂಪಸ್ ಅನ್ನು ಉದ್ಘಾಟಿಸಿದರು
ವಿದೇಶಾಂಗ ಸಚಿವ ಎಸ್.ಜೈಶಂಕರ್, ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಮತ್ತು ಇತರ ಪ್ರತಿನಿಧಿಗಳು ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ನಲ್ಲಿ ಉಪಸ್ಥಿತರಿದ್ದರು. 17 ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಮಾತನಾಡಿದ ಪ್ರಧಾನಿ ಮೋದಿ “ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳಲ್ಲಿ ನಳಂದಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನಳಂದ ಕೇವಲ ಒಂದು ಹೆಸರಲ್ಲ, ಅದು ಒಂದು ಅಸ್ಮಿತೆ ಮತ್ತು ಗೌರವ. ನಳಂದ ಒಂದು ಮೌಲ್ಯ ಮತ್ತು ಮಂತ್ರ… ಬೆಂಕಿಯು ಪುಸ್ತಕಗಳನ್ನು ಸುಡಬಹುದು ಆದರೆ ಅದು ಜ್ಞಾನವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದರು.
ನಳಂದ ಒಂದು ಕಾಲದಲ್ಲಿ ಭಾರತದ ಶೈಕ್ಷಣಿಕ ಅಸ್ಮಿತೆಯ ಕೇಂದ್ರಬಿಂದುವಾಗಿತ್ತು. ಶಿಕ್ಷಣವು ಗಡಿಗಳು, ಲಾಭ ಮತ್ತು ನಷ್ಟಗಳನ್ನು ಮೀರಿ ಹೋಗುತ್ತದೆ. ಶಿಕ್ಷಣವು ನಮ್ಮ ಆಲೋಚನೆಗಳು ಮತ್ತು ನಡವಳಿಕೆಯನ್ನು ರೂಪಿಸುತ್ತದೆ.”ಪ್ರಾಚೀನ ಕಾಲದಲ್ಲಿ, ನಳಂದ ವಿಶ್ವವಿದ್ಯಾಲಯಕ್ಕೆ ಪ್ರವೇಶವು ವಿದ್ಯಾರ್ಥಿಯ ರಾಷ್ಟ್ರೀಯತೆಯನ್ನು ಆಧರಿಸಿರಲಿಲ್ಲ. ಜೀವನದ ವಿವಿಧ ಸ್ತರಗಳ ಜನರು ಶಿಕ್ಷಣವನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಿದ್ದರು ಎಂದರು.