ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಗೌಡ ಸೇರಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ.
ನಟ ದರ್ಶನ್, ಪವಿತ್ರಗೌಡ, ಎಸ್ ಪ್ರದೋಷ್, ಕೆ ಪವನ್, ನಂದೀಶ್, ಕಾರ್ತಿಕ್ , ನಿಖಿಲ್ ನಾರಾಯಣ್. ಆರ್ ವಿನಯ್, ರಾಘವೇಂದ್ರ ಅಲಿಯಾಸ್ ರಾಘು ಸೇರಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಸಂಜೆ 4 :30 ಕ್ಕೆ ಬಂಧಿತ ಆರೋಪಿಗಳನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ( ಕೊಲೆಯಾದ ವ್ಯಕ್ತಿ) ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದನು ಎನ್ನಲಾಗಿದೆ. ಪವಿತ್ರ ಗೌಡ ಕೂಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ನಂತರ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ನಂತರ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ ಶೆಡ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ. ನಾಲ್ಕು ಮಂದಿ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿದ್ದು, ಈ ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಣುಕಾಸ್ವಾಮಿ ಇದೀಗ ಕೊಲೆ ಆಗಿ ಹೋಗಿದ್ದಾರೆ. ರೇಣುಕಾಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ದರ್ಶನ್ ಅಪ್ಪಟ ಅಭಿಮಾನಿಯಾಗಿದ್ದು, ದರ್ಶನ್ ಸಂಸಾರದಲ್ಲಿ ಪವಿತ್ರಾ ಗೌಡ ಪ್ರವೇಶವನ್ನು ಸಹಿಸದ ರೇಣುಕಾಸ್ವಾಮಿ ಬಹಳ ಬೇಸರಗೊಂಡಿದ್ದನು. ನಮ್ಮ ಡಿ ಬಾಸ್ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗುತ್ತಿದೆ ಎಂಬುದನ್ನು ತಿಳಿದು ಬೇಸರಗೊಂಡಿದ್ದ ಅಭಿಮಾನಿ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸೋಷಿಯಲ್ ಮೀಡಿಯಾದಲ್ಲಿ ಬೈದಿದ್ದನು ಎನ್ನಲಾಗಿದೆ.