ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ರ ಅಂಗವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ರ ಮತದಾನ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಜರುಗಿತ್ತು. ಜಗತ್ತಿನ ಅತಿದೊಡ್ಡ ಪ್ರಜಾಪಭುತ್ವ ದೇಶವಾಗಿರುವ ನಮ್ಮ ಭಾರತದಲ್ಲಿ ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ’ದಂತೆ ಆಚರಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ – 2019 ಹಾಗೂ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಸಂದರ್ಭದಲ್ಲಿ ಸಹ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾ ಚಿತ್ರಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಭಾರತ ಚುನಾವಣಾ ಆಯೋಗ ಪ್ರಶಂಸಿವುದರ ಜೊತೆಗೆ, ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ನಮ್ಮ ರಾಜ್ಯದ ಈ ಛಾಯಾಚಿತ್ರಗಳನ್ನು ಬಳಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರಾಜ್ಯಮಟ್ಟದ ಈ ಛಾಯಾಚಿತ್ರ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಎ.ವಿ.ಸೂರ್ಯಸೇನ್, ಸದಸ್ಯರಾಗಿ ರಾಜ್ಯಮಟ್ಟದ ಸ್ವೀಪ್ ಹಿರಿಯ ಸಮಾಲೋಚಕರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನೇಮಿಸಲಾಗಿತ್ತು.
*ವಿಜೇತರ ಪಟ್ಟಿ ಹಾಗೂ ಬಹುಮಾನಗಳ ವಿವರ
ಪ್ರಥಮ ಬಹುಮಾನ(ರೂ.25 ಸಾವಿರ): ಮಂಗಳೂರಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಛಾಯಾಗ್ರಾಹಕ ಹೆಚ್ ಫಕ್ರುದ್ದೀನ್.
ದ್ವಿತೀಯ ಬಹುಮಾನ(ರೂ.15 ಸಾವಿರ): ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ಬಿ ದಸ್ತೇನವರ.
ತೃತೀಯ ಬಹುಮಾನ(ರೂ.10 ಸಾವಿರ): ಮೂಡಬಿದಿರೆಯ ಹವ್ಯಾಸಿ ಛಾಯಾಗ್ರಾಹಕ ಜಿನೇಶ್ ಪ್ರಸಾದ್.
ಸಮಾಧಾನಕರ ಬಹುಮಾನ(ರೂ.3 ಸಾವಿರ) ಇಬ್ಬರು ಆಯ್ಕೆ: ಉಡುಪಿಯ ಉದಯವಾಣಿ ಪತ್ರಿಕೆಯ ಅಸ್ಟ್ರೋ ಮೋಹನ್ ಹಾಗೂ ಬೆಂಗಳೂರಿನ ಸಂಜೆ ಸಮಯ ಪತ್ರಿಕೆಯ ಪೂರ್ಣಿಮ ರವಿ.
ವಿಶೇಷ ಬಹುಮಾನ(ರೂ.2,500) ಇಬ್ಬರು ಆಯ್ಕೆ: ಮೈಸೂರಿನ ವಿಜಯವಾಣಿ ಪತ್ರಿಕೆಯ ಕೆ.ಹೆಚ್ ಚಂದ್ರು ಹಾಗೂ ಕಲಬುರಗಿಯ ವಿಜಯ ಕರ್ನಾಟಕ ಪತ್ರಿಕೆಯ ಶಿವಶರಣಪ್ಪ ಬೆನ್ನೂರ್ ಅವರು ವಿಜೇತರಾಗಿದ್ದಾರೆ.
ಪ್ರಸ್ತುತ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ನಿಮಿತ್ತ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಮಾಧ್ಯಮಗಳಲ್ಲಿ ಕಾರ್ಯ ನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರು ಸೇರಿ ಒಟ್ಟು 219 ಜನರು ಭಾಗವಹಿಸಿದ್ದರು. ಛಾಯಾಗ್ರಾಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಕಳುಹಿಸಿದ್ದರು. ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.