ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ ಕಟ್ ಮಾಡಲು ಹೆಚ್ಚು ಕೆಲಸಗಾರರು ಬೇಕಾಗುತ್ತಾರೆ. ಅಥವಾ ಅದಕ್ಕಾಗಿ ಯಂತ್ರಗಳನ್ನು ಅವಲಂಬಿಸಬೇಕಾಗುತ್ತದೆ. ಕೆಲವರಿಗೆ ಈರುಳ್ಳಿ ಕತ್ತರಿಸಬೇಕೆಂಬ ಸುದ್ದಿ ಕೇಳ್ತಿದ್ದಂತೆಯೇ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಯಂತ್ರಕ್ಕಿಂತಲೂ ವೇಗವಾಗಿ ಮತ್ತು ವಿಭಿನ್ನ ಶೈಲಿಯಲ್ಲಿ ತರಕಾರಿ ಕಟ್ ಮಾಡುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ 19 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಫುಡ್ ಕಂಟೆಂಟ್ ಕ್ರಿಯೇಟರ್ ದುರ್ಗಾಪ್ರಸಾದ್ ಯಾವುದೇ ಸಮಯದಲ್ಲಿ ಬೇಕಾದರೂ ದೊಡ್ಡ ಪ್ರಮಾಣದ ಈರುಳ್ಳಿಯನ್ನು ವೇಗವಾಗಿ ಕತ್ತರಿಸುತ್ತಾರೆ. ಈರುಳ್ಳಿ ಕತ್ತರಿಸುವ ವಿಭಿನ್ನ ವಿಧಾನಗಳನ್ನು ಪ್ರದರ್ಶಿಸುವ ಹಲವಾರು ವೀಡಿಯೊಗಳನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು ಒಂದಕ್ಕಿಂತ ಒಂದು ಭಿನ್ನವಾಗಿವೆ.
ಸಿಪ್ಪೆ ಸುಲಿದ ಈರುಳ್ಳಿಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿದ್ದು ಕೈಯಲ್ಲಿ ಎರಡು ಚಾಕು ಹಿಡಿದು ಅವುಗಳನ್ನು ವೃತ್ತಾಕಾರದಲ್ಲಿ ವೇಗವಾಗಿ ತಿರುಗಿಸುತ್ತಾ ಪಾತ್ರೆಯಲ್ಲಿರುವ ಈರುಳ್ಳಿಗಳನ್ನು ಕತ್ತರಿಸಿದ್ದಾರೆ. ಇದೇ ರೀತಿ ಹೆಚ್ಚಿನ ಪ್ರಮಾಣದ ಟೊಮ್ಯಾಟೋ ಸಹ ಒಂದೇ ಸಮಯದಲ್ಲಿ ಕತ್ತರಿಸಿದ್ದಾರೆ. ಇವರನ್ನು ನೆಟ್ಟಿಗರು ಹ್ಯೂಮನ್ ಮಿಕ್ಸರ್ ಎಂದು ಬಣ್ಣಿಸಿದ್ದಾರೆ.
ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ, ವ್ಯಕ್ತಿಯೊಬ್ಬ ಈರುಳ್ಳಿಯನ್ನು ದುರ್ಗಾ ಪ್ರಸಾದ್ ಅವರ ತೋಳಿನ ಮೇಲಿಟ್ಟು ಕತ್ತರಿಸಿದ್ದಾರೆ. ಸ್ವಲ್ಪವೂ ಭಯವಿಲ್ಲದೇ ದುರ್ಗಾಪ್ರಸಾದ್ ನಿಂತಿದ್ದು ಗಮನ ಸೆಳೆದಿದೆ.