ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಮಾಝ್ ಮುನೀರ್ ಕೈವಾಡ ಇರುವುದು ಖಚಿತವಾಗಿದೆ ಎಂದು ಎನ್ ಐ ಎ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ಜೈಲಿನಲ್ಲಿ ಕುಳಿತುಕೊಂಡು ಮಾಝ್ ಮುನೀರ್ ಸ್ಪೋಟಕ್ಕೆ ಸ್ಕೆಚ್ ಹಾಕಿದ್ದು, ನೋಟ್ ಬುಕ್ ನಲ್ಲಿ ಕೆಲವು ಕೋಡ್ ವರ್ಡ್ ಗಳನ್ನು ಬರೆದು ಸ್ಪೋಟಕ್ಕೆ ಸಂಚು ರೂಪಿಸಿರುವುದು ಬಯಲಾಗಿದೆ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಮಾಜ್ ಮುನೀರ್ ಎ1 ಆರೋಪಿಯಾಗಿದ್ದಾನೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ದಾಳಿ ನಡೆಸಿದ ಬಳಿಕ ಮಾಝ್ ಬ್ಯಾರಕ್ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು.
ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರೋ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.