ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದ್ದು, ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ. 2 ವರ್ಷದ ಕಂದಮ್ಮ ಸಾತ್ವಿಕ್ ಸಾವಿನ ಕದ ತಟ್ಟಿ ಕೊನೆಗೂ ಸುರಕ್ಷಿತವಾಗಿ ಹೊರಬಂದಿದ್ದಾನೆ.
ರಾತ್ರಿಯಿಂದ ಬೆಳಗ್ಗೆವರೆಗೂ ಸತತ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿಗಳು ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ. ಸಾತ್ವಿಕ್ ಬದುಕಿ ಬರಲೆಂದು ಇಡೀ ಕರುನಾಡು ಪ್ರಾರ್ಥನೆ ಸಲ್ಲಿಸಿತ್ತು, ಅಂತೂ ಪ್ರಾರ್ಥನೆ ಯಶಸ್ವಿಯಾಗಿದೆ. ಸದ್ಯ, ಸಾತ್ವಿಕ್ ನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಕಾರ್ಯಾಚರಣೆ ನಡೆಸಿದೆ. ಸುಮಾರು 20 ಅಡಿ ಆಳದಲ್ಲಿ ಬುಧವಾರ (ಏಪ್ರಿಲ್ 3) ಸಂಜೆ 5.30ರ ಸುಮಾರಿಗೆ ಸಾತ್ವಿಕ್ ಕೊಳವೆಬಾವಿಗೆ ಬಿದ್ದಿದ್ದು, ಕೊಳವೆಬಾವಿ ಪಕ್ಕ 5 ಅಡಿಯ ಸುರಂಗ ಕೊರೆದು, ಜೆಸಿಬಿಯಿಂದ ಅಗೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿತ್ತು. ಬಾಲಕ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದು 18 ಗಂಟೆಗಳು ಕಳೆದಿತ್ತು, ಉಸಿರಾಟಕ್ಕಾಗಿ ಆಕ್ಸಿಜನ್ ವ್ಯವಸ್ಥೆ ಸಹ ಮಾಡಲಾಗಿತ್ತು. ನಂತರ ಕ್ಯಾಮರಾ ಇಳಿಬಿಟ್ಟು ಬಾಲಕನ ಚಲನವಲನಗಳನ್ನು ಗಮನಿಸಲಾಗುತಿತ್ತು. ಅಂತೂ ಇಂತೂ 18 ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.