ಬೆಂಗಳೂರು : ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ, ಕನ್ನಡಿಗರಿಗೆ ದ್ರೋಹ ಎಸಗಬೇಡಿ, ಕನ್ನಡ ಭಾಷೆಯನ್ನು ತುಳಿಯಲು ಹೋಗಬೇಡಿ, ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಲು ಹೋಗಬೇಡಿ….ಹೀಗಂತ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ, ಕನ್ನಡಿಗರಿಗೆ ದ್ರೋಹ ಎಸಗಬೇಡಿ, ಕನ್ನಡ ಭಾಷೆಯನ್ನು ತುಳಿಯಲು ಹೋಗಬೇಡಿ, ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಲು ಹೋಗಬೇಡಿ. ನಿಮ್ಮ ಬಿಜೆಪಿ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಿ. ಇದರಿಂದ ಗೌರವದ ಸೋಲನ್ನಾದರೂ ಪಡೆಯಬಹುದು. ಇದರ ಹೊರತಾಗಿ ಅಡ್ಡಮಾರ್ಗದ ಮೂಲಕ ಚುನಾವಣೆಯನ್ನು ಎದುರಿಸಲು ಹೊರಟರೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವುದು ಖಂಡಿತ ಎಂದು ವಾಗ್ಧಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಯ ಆಧಾರದಲ್ಲಿ ಮತಕೇಳುವ ವಿಶ್ವಾಸ ನಿಮಗೆ ಇಲ್ಲ. ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಸಹೃದಯತೆಯೂ ನಿಮಗೆ ಇಲ್ಲ. ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ-ಸೌಹಾರ್ದತೆಯನ್ನು ಕೆಡಿಸಬಾರದೆಂಬ ಒಳ್ಳೆಯತನದ ವಿವೇಕವೂ ನಿಮಗೆ ಇಲ್ಲ. ನೀವು ನೀಡಿರುವ ಸಲಹೆಯಂತೆಯೇ ತಾವು ಗಲಭೆ ನಡೆಸುತ್ತಿರುವುದಾಗಿ ಮೈಸೂರಿನ ಸಂಸದನೊಬ್ಬ ಬಹಿರಂಗ ಹೇಳಿಕೆ ನೀಡಿದ್ದಾನೆ. ನೀವು ಹೋದಲ್ಲಿ ಬಂದಲ್ಲಿ ಗಲಭೆ ನಡೆದು ಶಾಂತಿ ಭಂಗವಾಗುತ್ತಿರುವುದಕ್ಕೆ ಇದೇ ಕಾರಣವೇ ಎಂದು ವಾಗ್ಧಾಳಿ ನಡೆಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್, ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಸ್ವಾಮ್ಯದ ಎಲ್ಲ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನೂ ಮಾಧ್ಯಮವಾಗಿ ಬಳಸಲು ಅವಕಾಶ ಇರಬೇಕೆಂಬುದು ಕನ್ನಡಿಗರ ಬಹುವರ್ಷಗಳ ಬೇಡಿಕೆ. ಈ ಅವಕಾಶದಿಂದ ವಂಚಿತರಾದ ಉದ್ಯೋಗಾರ್ಥಿ ಕನ್ನಡಿಗ ಯುವಕಿ-ಯುವತಿಯರು ಉದ್ಯೋಗದಿಂದಲೂ ವಂಚಿತರಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಇದಕ್ಕೆ ನೀವೇ ಹೊಣೆ ಅಲ್ಲವೇ? ಹಿಂದಿ ಎನ್ನುವುದು ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಮತ್ತೆ ಮತ್ತೆ ಹೇಳಿ ಆ ಭಾಷೆಯನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಯಾಕೆ? ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ಸಂವಿಧಾನ ಹೇಳಿದೆಯೇ ಅಮಿತ್ ಶಾ ಅವರೇ? ಹೇಳಿದ್ದರೆ ಸಂವಿಧಾನದ ಯಾವ ಪರಿಚ್ಚೇದಲ್ಲಿ ಹೇಳಲಾಗಿದೆ? ದಯವಿಟ್ಟು ಅದನ್ನು ಕನ್ನಡಿಗರ ಮುಂದೆ ತೆರೆದಿಡಿ ಎಂದು ಅಮಿತ್ ಶಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
https://twitter.com/siddaramaiah/status/1775063182459261418