ಬಳ್ಳಾರಿ : ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಶುಕ್ರವಾರದಂದು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ.8,23,440 ನಗದು ಹಣವನ್ನು 91-ಕಂಪ್ಲಿ ಕ್ಷೇತ್ರ ವ್ಯಾಪ್ತಿಯ ಕೋಟೆ ಚೆಕ್ಪೋಸ್ಟ್ ಬಳಿ ಎಸ್ಎಸ್ಟಿ ತಂಡದ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಅಬಕಾರಿ ಪೊಲೀಸ್ ಅಧಿಕಾರಿಗಳಿಂದ 25.78 ಲೀಟರ್ (ರೂ.6331 ಮೌಲ್ಯ) ಮದ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ 12.15 ಲೀಟರ್ (ರೂ.6513 ಮೌಲ್ಯ) ಮದ್ಯ ಸೇರಿದಂತೆ ಒಟ್ಟು 37.96 ಲೀಟರ್ ಮದ್ಯ (ರೂ.12,844 ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನಧೀಕೃತ 405 ಮಿಕ್ಸರ್ ಗ್ರೈಂಡರ್ಸ್ (ಅಂದಾಜು ರೂ.5,25,690 ಮೌಲ್ಯ) ಮತ್ತು ಒಂದು ಲಾರಿ ವಾಹನ ಜಪ್ತಿ ಮಾಡಲಾಗಿದ್ದು, ಒಟ್ಟು 08 ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯಾದ್ಯಂತ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಪ್ರವೃತ್ತವಾಗಿದೆ. 16 ಫ್ಲೈಯಿಂಗ್ ಸ್ಕ್ವಾಡ್ ,
24 ಎಸ್ಎಸ್ಟಿತಂಡ ಮತ್ತು 7 ಅಬಕಾರಿ ತಂಡ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.