ನವದೆಹಲಿ : ಉತ್ತರಾಖಂಡದ ನಾನಕ್ಮಠಾ ಸಾಹಿಬ್ ಗುರುದ್ವಾರದ ಡೇರಾ ಮುಖ್ಯಸ್ಥನನ್ನು ಗುರುವಾರ ಮುಂಜಾನೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೇವಾಲಯದ ಆವರಣದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಇದೀಗ ಈ ದೃಶ್ಯಾವಳಿಯನ್ನು ತೋರಿಸುವ ಸಿಸಿಟಿವಿ ವೀಡಿಯೊ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಡೇರಾ ಮುಖ್ಯಸ್ಥರು ಬೆಳಿಗ್ಗೆ 6: 30 ರ ಸುಮಾರಿಗೆ ಆವರಣದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದು ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಬಾಬಾ ತರ್ಸೆಮ್ ಸಿಂಗ್ ಅವರನ್ನು ಖತಿಮಾದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಿಸದೇ ನಿಧನರಾದರು ಎಂದು ಉಧಮ್ ಸಿಂಗ್ ನಗರ ಎಸ್ಎಸ್ಪಿ ಮಂಜುನಾಥ್ ತಿಳಿಸಿದ್ದಾರೆ. ನಾನಕ್ಮಠ ಸಾಹಿಬ್ ಗುರುದ್ವಾರವು ರಾಜ್ಯದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ-ತನಕ್ಪುರ ಮಾರ್ಗದಲ್ಲಿ ನೆಲೆಗೊಂಡಿರುವ ಪೂಜ್ಯ ಸಿಖ್ ದೇವಾಲಯವಾಗಿದೆ.
ಉತ್ತರಾಖಂಡ ಪೊಲೀಸರು ಈ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ. ಶಾಂತಿ ಕಾಪಾಡಲು ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕ್ಮಟ್ಟಾ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಶಾಂತಿ ಕಾಪಾಡುವಂತೆ ಪೊಲೀಸರು ಸಿಖ್ ಸಮುದಾಯಕ್ಕೆ ಮನವಿ ಮಾಡಿದ್ದಾರೆ.