ಬೆಂಗಳೂರು : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ‘ನಮ್ಮ ನೀರು, ನಮ್ಮ ಹಕ್ಕು” ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಾಥ್ ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿಕೆಶಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಮಾಡಿದ “ನಮ್ಮ ನೀರು, ನಮ್ಮ ಹಕ್ಕು” ಹೋರಾಟಕ್ಕೆ ಮಾಜಿ ಪ್ರಧಾನಿ ಶ್ರೀ ದೇವೇಗೌಡ ಅವರು ಧ್ವನಿಗೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ಮನಗಂಡು ಕೇಂದ್ರ ಸರಕಾರ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ನೀಡುತ್ತದೆ ಎಂಬ ವಿಶ್ವಾಸ ನನ್ನದು ಎಂದಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ನಿರೀಕ್ಷೆ ಮಾಡಿಯೇ ಕಾಂಗ್ರೆಸ್ ಪಕ್ಷವು “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆ ಮಾಡಿತ್ತು. ಆ ಮೂಲಕ ನಮ್ಮ ಹಕ್ಕೊತ್ತಾಯವನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿತ್ತು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕೆಂಬ ಸಂಕಲ್ಪದಿಂದಲೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೇಕೆದಾಟು ಯೋಜನೆಗಾಗಿ ಕಾನೂನು ಹೋರಾಟ ಮುಂದುವರೆದಿದೆ. ನಮಗೆ ಗೆಲುವು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ದೇವೇಗೌಡರು ನಮ್ಮ ಹೋರಾಟಕ್ಕೆ ಧ್ವನಿಗೂಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.