ನವದೆಹಲಿ: ಲೋಕಸಭಾ ಚುನಾವಣೆಗೆ ಎನ್ಡಿಎ ಅಂಗಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದದಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷಕ್ಕೆ (ಆರ್ಎಲ್ಜೆಪಿ) ಒಂದೇ ಒಂದು ಸ್ಥಾನವನ್ನು ನೀಡದ ಕಾರಣ ಕೇಂದ್ರ ಸಚಿವ ಪಶುಪತಿ ಕುಮಾರ್ ನರೇಂದ್ರ ಮೋದಿ ಸರ್ಕಾರದಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಪಕ್ಷಕ್ಕೆ ನ್ಯಾಯ ನಿರಾಕರಿಸಿದ್ದರಿಂದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ‘ಸ್ವತಂತ್ರ’ ನಿರ್ಧಾರ ತೆಗೆದುಕೊಳ್ಳಲು ಒಮ್ಮತಕ್ಕೆ ಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಆರ್ಎಲ್ಜೆಪಿ ನಾಯಕರೊಬ್ಬರು ತಿಳಿಸಿದ್ದರು.
ಒಪ್ಪಂದದಲ್ಲಿ ಆರ್ಎಲ್ಜೆಪಿಗೆ ‘ಗೌರವಯುತ’ ಸಂಖ್ಯೆಯ ಸ್ಥಾನಗಳನ್ನು ನೀಡಿದರೆ ಮಹಾ ಮೈತ್ರಿಕೂಟಕ್ಕೆ ಸೇರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪಕ್ಷವು ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ವೈಶಾಲಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಹಾಜಿಪುರದಲ್ಲಿ ತಮ್ಮ ಸೋದರಳಿಯ ಮತ್ತು ಎಲ್ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪರಾಸ್ ಈಗಾಗಲೇ ಘೋಷಿಸಿದ್ದಾರೆ.