ಶಿವಮೊಗ್ಗ : ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮಕ್ಕೆ ನಾನು ಬರೋದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕೊನೆಗೂ ತಮ್ಮ ಹಠ ಸಾಧಿಸಿದ್ದಾರೆ. ಹೇಳಿದಂತೆ ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್ಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶಗೊಂಡು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಆಗಮಿಸಲೇ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 3 ಗಂಟೆಗೆ ತೆಲಂಗಾಣದಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರಿಗೆ ಸ್ವಾಗತ ಕೋರಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿದ್ದರು. ಆದರೆ ಈಶ್ವರಪ್ಪ ಮಾತ್ರ ಬರಲಿಲ್ಲ.
ಕಳೆದ ಎರಡು ದಿನದಿಂದ ಆರ್ ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಈಶ್ವರಪ್ಪ ಅವರ ಮನ ಒಲಿಸುವ ಕೆಲಸ ಮಾಡಿದ್ದರು. ಆದರೆ ಬಿಜೆಪಿ ನಾಯಕರ ಮಾತಿಗೆ ಸೊಪ್ಪು ಹಾಕದ ಈಶ್ವರಪ್ಪ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರಲಿಲ್ಲ. ಈಶ್ವರಪ್ಪ ಬರದೇ ಇರುವ ಬಗ್ಗೆ ಮೊದಲೇ ಮಾಹಿತಿ ಪಡೆದ ಬಿಜೆಪಿ ನಾಯಕರು ವೇದಿಕೆ ಕಾರ್ಯಕ್ರಮದ ಪಟ್ಟಿಯಿಂದ ಈಶ್ವರಪ್ಪರ ಹೆಸರನ್ನು ಕೈ ಬಿಟ್ಟಿದ್ದರು.