ಶಿವಮೊಗ್ಗ : ಪ್ರಧಾನಿ ನರೇಂದ್ರ ಮಲೆನಾಡು ಶಿವಮೊಗ್ಗದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಪ್ರೀಡಂ ಪಾರ್ಕ್ ನಲ್ಲಿ ನಡೆದ ಸಮಾವೇಶದಲ್ಲಿ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಸ್ಮರಿಸಿ ಭಾಷಣ ಆರಂಭಿಸಿದ್ದಾರೆ.
ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮೋದಿ ವಿಕಸಿತ ಭಾರತ ನಿರ್ಮಿಸುವುದೇ ನಮ್ಮ ಗುರಿ. ಜೂನ್ 4 ರಂದು ಎನ್ ಡಿ ಎ ಮೈತ್ರಿಕೂಟ 400 ರ ಗಡಿ ದಾಟಲಿದೆ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಲು 400 ಕ್ಕೂ ಅಧಿಕ ಸ್ಥಾನ ಗೆಲ್ಲಬೇಕಿದೆ. ತಮ್ಮ ಸುಳ್ಳು ಮರೆಮಾಚಲು ಕಾಂಗ್ರೆಸ್ ಮೋದಿ, ಕೇಂದ್ರ ಸರ್ಕಾರದತ್ತ ಸುಳ್ಳು ಆರೋಪ ಮಾಡುತ್ತಿದೆ. ಬಡವರ ಕಲ್ಯಾಣ, ಶ್ರೇಯೋಭಿವೃದ್ದಿಗಾಗಿ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ, ಆದರೆ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದನ್ನೇ ಮುಂದುವರೆಸಿದೆ ಎಂದು ಹೇಳಿದರು.
ವಿಕಸಿತ ಕರ್ನಾಟಕ, ವಿಕಸಿತ ಭಾರತ, ಬಡತನ ಕಡಿಮೆ ಮಾಡಲು ಈ ಬಾರಿ 400ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ಪ್ರತಿ ದಿನ ಬೆಳಗ್ಗೆ ಎದ್ದು ಸುಳ್ಳು ಹೇಳುವುದೇ ಅವರ ಕಾರ್ಯವಾಗಿದೆ. ಇಲ್ಲಿ ಸಿಎಂ ಹುದ್ದೆಗಾಗಿ ಕಾಯುತ್ತಿದ್ದಾರೆ, ಮತ್ತೊಬ್ಬರು ಕುರ್ಚಿಗಾಗಿ ಕಾಯುತ್ತಿದ್ದಾರೆ. ಮತ್ತೊಬ್ಬರು ಸೂಪರ್ ಸಿಎಂ, ಇನ್ನೊಬ್ಬರು ಶ್ಯಾಡೋ ಸಿಎಂ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಲೋಕಸಭೆಯ ಪ್ರತಿ ಸ್ಥಾನದಲ್ಲಿ ಬಿಜೆಪಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಾನು ರಾಜಕಾರಣಕ್ಕೆ ಬಂದಾಗ ಹಿಂದೂ ಸಮುದಾಯದ ದೇವತಾ ಶಕ್ತಿ ನನಗೆ ಪ್ರೇರಣೆ ನೀಡಿದೆ. ಕೋಟಿ ಕೋಟಿ ಜನರು ಇದೇ ಶಕ್ತಿಯ ಪ್ರೇರಣೆ, ಸ್ಪೂರ್ತಿ ಪಡೆದು ಮುನ್ನಡೆಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಅಧಿಕಾರಕ್ಕೆ ಬಂದ ಬಳಿಕ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಮೋದಿ ಮೇಲೂ ಆರೋಪ ಮಾಡುತ್ತಿದೆ ಎಂದರು.
ಜನರನ್ನು ಲೂಟಿ ಮಾಡುವುದು, ತಮ್ಮ ಜೇಬು ಭರ್ತಿ ಮಾಡುವುದು ಕಾಂಗ್ರೆಸ್ ಗುರಿಯಾಗಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಂಡಿದೆ. ಇದು ಹೀಗೆ ಮುಂದುವರೆದರೆ ಸರ್ಕಾರ ನಡೆಸಲು ಅವರಿಗೆ ಎಲ್ಲಿಂದ ಹಣ ಬರುತ್ತದೆ. ಜೂನ್ 4 ರಂದು ಕರ್ನಾಟಕದಲ್ಲಿ ಕಮಲದ ಹೂ ಅರಳಲಿದೆ. ಕರ್ನಾಟಕದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.