ಮಥುರಾ : ಭಕ್ತರಿಂದ ತುಂಬಿ ತುಳುಕುತ್ತಿದ್ದ ಬರ್ಸಾನಾದ ರಾಧಾರಾಣಿ ದೇವಸ್ಥಾನದಲ್ಲಿ ಮೆಟ್ಟಿಲುಗಳ ತಡೆಗೋಡೆ ಮುರಿದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದೇವಾಲಯದ ಅರ್ಚಕರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಭಕ್ತರು ದೇವಾಲಯದ ಬಾಗಿಲು ತೆರೆಯಲು ಹಲವಾರು ಗಂಟೆಗಳ ಕಾಲ ಕಾಯುತ್ತಿದ್ದರು. ಬಾಗಿಲು ತೆರೆದ ಕೂಡಲೇ ಒಂದೇ ಸಮನೆ ಭಕ್ತರು ನುಗ್ಗಿದ್ದಾರೆ. ಪರಿಣಾಮ ಮೆಟ್ಟಿಲುಗಳ ತಡೆಗೋಡೆ ಕುಸಿದಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಜಮಾಯಿಸಿದ್ದರು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.
ಘಟನೆಯ ನಂತರ 22 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ಬರ್ಸಾನಾದ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ.ಮನೋಜ್ ವಶಿಷ್ಠ ತಿಳಿಸಿದ್ದಾರೆ.ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ನಂತರ ಜನಸಂದಣಿಯನ್ನು ನಿಯಂತ್ರಿಸಲಾಯಿತು ಮತ್ತು ಭಕ್ತರಿಗೆ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಯಿತು.