ಬೆಂಗಳೂರು : ಬೆಂಗಳೂರಿನ ಜನತೆಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆಸ್ತಿ ತೆರಿಗೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು, ಆದರೀಗ ಆಸ್ತಿ ತೆರಿಗೆ ಹೆಚ್ಚಳಕ್ಕೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗಿದೆ .
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದಾಗಿ ಬರುವ ಏಪ್ರಿಲ್ನಿಂದ ನಗರದ ಎಲ್ಲಾ ಮಾದರಿ ಆಸ್ತಿಗಳ ತೆರಿಗೆ ಪ್ರಮಾಣ ಕನಿಷ್ಠ ಶೇಕಡ 5.3ರಿಂದ ಗರಿಷ್ಠ ಶೇ.8.2ರವರೆಗೆ ಹೆಚ್ಚಳವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವರ್ಷಗಳ ಬಳಿಕ ಆಸ್ತಿ ತೆರಿಗೆ ಏರಿಕೆ ಮಾಡಲು ನಿರ್ಧರಿಸಿ ಅಧಿಸೂಚನೆ ಹೊರಡಿಸಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಹೊಸ ಪದ್ದತಿಯಂತೆ ಆಸ್ತಿ ತೆರಿಗೆ ಹೆಚ್ಚಳದ ಸರಾಸರಿ ಶೇ. 6.5ರಷ್ಟಿದ್ದು, ಎಂಟು ವರ್ಷಗಳಿಗೆ ಹೋಲಿಸಿದರೆ ವಾರ್ಷಿಕ ಶೇ.1ಕ್ಕಿಂತ ಕಡಿಮೆ ಹೆಚ್ಚಳವಾಗಿದೆ. 2016ರಲ್ಲಿ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಅಂದರೆ ಎಂಟು ವರ್ಷಗಳಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ವಸತಿ ಮತ್ತು ವಸತಿಯೇತರ ಕಟ್ಟಡಗಳು ನಿರ್ಮಾಣಗೊಂಡು ಎಷ್ಟು ವರ್ಷಗಳಾಗಿವೆ ಎಂಬುದರ ಆಧಾರದ ಮೇಲೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.