ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯಕ, ಎಲ್ಲರೂ ಲೋಕಸಭಾ ಚುನಾವಣಾ ಹಬ್ಬದಲ್ಲಿ ಭಾಗವಹಿಸುವ ಮೂಲಕ ಪ್ರಜಾತಂತ್ರ ಆರಾಧಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಕರೆ ನೀಡಿದರು.
ಅವರು ಶನಿವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಯುವಜನ ಕ್ರೀಡಾ ಇಲಾಖೆ ಹಾಗೂ ಮಾ ಸಾಹಸ ಕ್ರೀಡಾ ಅಕಾಡೆಮಿ ಸಹಭಾಗಿತ್ವದಲ್ಲಿ ಮತದಾರರ ಜಾಗೃತಿಗೆ ಆಯೋಜಿಸಲಾದ ಹಾಟ್ ಏರ್ ಬಲೂನ್ ತರಬೇತಿಗೆ ಚಾಲನೆ ನೀಡಿ ಖುದ್ದು ಹಾರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದೆ. ಯುವ ಮತದಾರರು ಏಪ್ರಿಲ್ 9 ರೊಳಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರು.
ಒಂದು ಮತ ಅನೇಕ ಅಶ್ವಶಕ್ತಿಗೆ ಸಮವಾಗಿದ್ದು ಯಾರು ಸಹ ಮತದಾನದಿಂದ ಹೊರಗುಳಿಯದೇ ಮತದಾನ ಮಾಡಬೇಕೆಂದ ಅವರು ಮಾರ್ಚ್ 17 ರಂದು ಹಾಟ್ ಏರ್ ಬಲೂನ್ ತರಬೇತಿ ನಡೆಯಲಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಮತದಾರರ ಪಟ್ಟಿಯನ್ನು ಅವಲೋಕಿಸಿ ಸೇರ್ಪಡೆ ಮಾತ್ತು ತಿದ್ದುಪಡಿ ಇದ್ದಲ್ಲಿ ಏಪ್ರಿಲ್ 9 ರೊಳಗಾಗಿ ಸಲ್ಲಿಸಬಹುದು. ಮತ್ತು ಚುನಾವಣೆಗೆ ಸಂಬಂಧಿಸಿದ ಸಹಾಯಕ್ಕಾಗಿ 1950 ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಯುವ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜೀಯಾದ ಪ್ರಕರಣಗಳ ವಿವರ
ಶನಿವಾರ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಆದಾಲತ್ನ್ನು ಹಮ್ಮಿಕೊಳ್ಳಲಾಗಿತ್ತು.
ರಾಜಿ, ಸಂಧಾನದ ಮೂಲಕ ಜಿಲ್ಲೆಯಲ್ಲಿ 4568 ಜಾರಿಯಲ್ಲಿರುವ ಪ್ರಕರಣಗಳಲ್ಲಿ ರೂ. 12,56,89,479 ಹಣದ ಪರಿಹಾರ ಒದಗಿಸಲಾಗಿದೆ. ಮತ್ತು 1,44,773 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 47,33,07,260 ಹಣದ ಪರಿಹಾರವಾಗಿ ರಾಜೀ ಮೂಲಕ ಕೊಡಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ.
ವಿವಿಧ ಪ್ರಕರಣಗಳ ವಿವರ: 81 ಅಪರಾಧಿಕ ಪ್ರಕರಣಗಳು, 143 ಚೆಕ್ ಅಮಾನ್ಯ ಪ್ರಕರಣಗಳು, 19 ಬ್ಯಾಂಕ್ ವಸೂಲಾತಿ ಪ್ರಕರಣಗಳು, 14 ಇತರೆ ಹಣ ವಸೂಲಾತಿ ಪ್ರಕರಣಗಳು, 53 ಅಪಘಾತ ಪ್ರಕರಣಗಳು, 19 ಪಾಲು ವಿಭಾಗ ಪ್ರಕರಣಗಳು, 200 ಜಾರಿ ಅರ್ಜಿಗಳು ಅಲ್ಲದ ಹಲವು ಕಾರಣಕ್ಕಾಗಿ ದಾಖಲಿಸಿದ 55 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತದೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 1568 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿದೆ.