ಬೆಂಗಳೂರು : ಸುಳ್ಳು ಸುದ್ದಿ ಹರಡುವುದು, ಫೋಟೊ, ವಿಡಿಯೋ ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಆನ್ಲೈನ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿ ಸೈಬರ್ ವಿಭಾಗದ (ಸಿ ಆ್ಯಂಡ್ ಎನ್) ಎಡಿಜಿಪಿ, ಗೃಹ ಇಲಾಖೆ, ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಮಾಹಿತಿ ಇಲಾಖೆಯ ಕಾರ್ಯದರ್ಶಿ, ಸರ್ಕಾರದ ನಾಮನಿರ್ದೇಶನ ಮಾಡಿದ ಕಾನೂನು ಸಲಹೆಗಾರ, ಐಟಿಬಿಟಿ ಇಲಾಖೆ ಒದಗಿಸುವ ಸೇವಾದಾರರು, ಸರ್ಕಾರ ನಾಮನಿರ್ದೇಶನ ಮಾಡುವ ತಲಾ ಒಬ್ಬರು ಸಾರ್ವಜನಿಕ ಮತ್ತು ತಾಂತ್ರಿಕ ವಲಯದವರು ಈ ಸಮಿತಿಯ ಸದಸ್ಯರಾಗಿರುತ್ತಾರೆ .
ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳುಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು . ಸಾಮಾಜಿಕ ಜಾಲತಾಣಗಳ ನಿಗಾ ಘಟಕಕ್ಕೆ ಭೇಟಿ ನೀಡಿದ ಅವರು, ಆಕ್ಷೇಪಾರ್ಹ ಮಾಹಿತಿ, ಸುಳ್ಳುಸುದ್ದಿಗಳು ಬಂದಾಗ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಿದರು.