ಬೆಂಗಳೂರು : ರಾಜ್ಯ ಸರ್ಕಾರದ ವಕ್ತಾರರನ್ನಾಗಿ ಸಚಿವರುಗಳ ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಹಾಗೂ ಸಂತೋಷ್ ಲಾಡ್ ಅವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ವಕ್ತಾರರಾಗಿ ನೇಮಕಗೊಂಡಿರುವ ಈ ಎಲ್ಲಾ ಸಚಿವರು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ರಾಜ್ಯದ ಜನರ ಮುಂದಿಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಧನ್ಯವಾದ ತಿಳಿಸಿದ ಪ್ರಿಯಾಂಕ್ ಖರ್ಗೆ
ಕರ್ನಾಟಕ ಸರ್ಕಾರದ ಅಧಿಕೃತ ವಕ್ತಾರನನ್ನಾಗಿ ನನ್ನನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು.
ನುಡಿದಂತೆ ನಡೆಯುತ್ತಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು, ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರವನ್ನು ಹಾಗೂ ಸರ್ಕಾರದ ಪ್ರತಿ ನೂತನ ಕಾರ್ಯಕ್ರಮಗಳ ಮಾಹಿತಿಯನ್ನು ನಾಡಿನ ಪ್ರತಿ ಮನೆ ಮನೆಗೂ ಮುಟ್ಟಿಸಲು ನನ್ನ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದಿದ್ದಾರೆ.