ಬೆಂಗಳೂರು : ಮಾ.25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ಮಕ್ಕಳು ಕೂಡ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಲ್ ಟಿಕೆಟ್ ಪಡೆಯಬಹುದಾಗಿದೆ. ಒಂದು ವೇಳೆ ಹಾಲ್ ಟಿಕೆಟ್ ನಲ್ಲಿ ಹೆಸರು, ರೋಲ್ ನಂ, ವಿಳಾಸ ತಪ್ಪಾಗಿ ಮುದ್ರಣವಾಗಿದ್ರೆ ಕೂಡಲೇ ಶಾಲಾ ಮುಖ್ಯೋಪಾಧ್ಯಾಯರ ಗಮನಕ್ಕೆ ತರಬೇಕು.
ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ, ಸದರಿ ವಿದ್ಯಾರ್ಥಿಯ ವಿವರವನ್ನು ಸಮರ್ಥನೆಯೊಂದಿಗೆ / ದಾಖಲೆಗಳೊಂದಿಗೆ ಕೂಡಲೇ ಮಂಡಲಿಗೆ ಕಳುಹಿಸಿಕೊಡುವುದು ಶಾಲೆಯ ಮುಖ್ಯೋಪಾಧ್ಯಾಯರ ಕರ್ತವ್ಯವಾಗಿರುತ್ತದೆ.
ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಗೆ ಒಟ್ಟು 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 4,58,427 ಬಾಲಕರು, 4,37,844 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.