alex Certify ಶಿವಮೊಗ್ಗ : ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ, ಜಿಲ್ಲಾಧಿಕಾರಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ : ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ, ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗ : ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮದಂತೆ ಜಿಲ್ಲೆಯಾದ್ಯಂತ ಕನ್ನಡ ಭಾಷೆಯ ವ್ಯಾಪಕ ಬಳಕೆ ಹಾಗೂ ಶೇ.60 ರಷ್ಟು ಕನ್ನಡ ಭಾಷೆಯನ್ನು ನಾಮಫಲಕಗಳ ಮೇಲ್ಭಾಗದಲ್ಲಿ ಪ್ರದರ್ಶಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸೂಚನೆ ನೀಡಿದರು.

ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ (ತಿದ್ದುಪಡಿ)ಅಧಿನಿಯಮ 2024ನ್ನು ರೂಪಿಸಿ ಆದೇಶಿಸಿರುವ ಹಿನ್ನೆಲೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಜಿಲ್ಲೆಯಾದ್ಯಂತ ಅಧಿನಿಯಮ ಜಾರಿಗೊಳಿಸುವ ಸಂಬಂಧ ಅವರು ಸೂಚನೆ ನೀಡಿದರು.

ಕನ್ನಡ ಭಾಷೆಯ ಸಮಗ್ರ ಅಭಿವೃದ್ದಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳು ಮತ್ತು ಕಲ್ಯಾಣ ಕ್ರಮಗಳನ್ನು ಕಲ್ಪಿಸುವುದಕ್ಕಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ ಜಾರಿಗೆ ಬಂದಿದ್ದು ಜಿಲ್ಲೆಯಾದ್ಯಂತ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಕೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಹಾಗೂ ಸಮಿತಿ ಸದಸ್ಯರು ಮೊದಲು ಒಂದು ವಾರ ಜಿಲ್ಲೆಯಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ ವ್ಯಾಪಕ ಅರಿವು ಮೂಡಿಸಿ ನಂತರ ಕ್ರಮ ವಹಿಸಬೇಕೆಂದರು.

ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು ಮತ್ತು ಸದರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು.

ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರುಗಳೂ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರಗಳು ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು.

ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿಗಳು, ನೋಟಿಸ್‍ಗಳು, ಅಧಿಸೂಚನೆ, ಜಾಹಿರಾತು, ರಸೀದಿ, ಇತ್ಯಾದಿಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು. ಶಿಕ್ಷಣ, ಉನ್ನತ ಶಿಕ್ಷಣ, ತಾಂತ್ರಿ ಶಿಕ್ಷಣ, ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷೆ, ನ್ಯಾಯಾಲಯ, ಬ್ಯಾಂಕುಗಳಲ್ಲಿ ಭಾಷೆ ಕಡ್ಡಾಯವಾಗಿ ಬಳಸಬೇಕು.
ಕನ್ನಡ ಭಾಷಾ ಅನುಷ್ಟಾನಕ್ಕಾಗಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಮಿತಿಗಳು, ಜಾರಿ ಪ್ರಾಧಿಕಾರಗಳು ಇರುತ್ತವೆ. ಸರ್ಕಾರಿ ಮತ್ತು ಖಾಸಗಿ ಪ್ರಾಧಿಕಾರ, ವ್ಯಕ್ತಿಗಳು ಅಧಿನಿಯಮದ ಉಪಬಂಧಗಳನ್ನು ಪಾಲಿಸುವಲ್ಲಿ ವಿಫಲವಾದಲ್ಲಿ ಅಂತಹ ವಿಫಲತೆಯನ್ನು ಕರ್ತವ್ಯಚ್ಯುತಿ ಎಂದು ಭಾವಿಸಿ ಶಿಸ್ತು ಕ್ರಮ ಹಾಗೂ ಜುಲ್ಮಾನೆಗೆ ಗುರಿಯಾಗತಕ್ಕದ್ದು.

ಶೇ.60 ಕನ್ನಡ ಬಳಕೆ : ಅಧಿನಿಯಮದ 17 ನೇ ಪ್ರಕರಣ ತಿದ್ದುಪಡಿ ಪ್ರಕಾರ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‍ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‍ಗಳು ಮುಂತಾದವುಗಳು ತಮ್ಮ ನಾಮಫಲಗಳಲ್ಲಿ ಮೇಲ್ಭಾಗದಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...