ಬೆಂಗಳೂರು : ಪ್ರಧಾನಿ ಮೋದಿ ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದಿದ್ರು..ನಿಮ್ಮ ಖಾತೆಗೆ ಬಂತಾ ? ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮೋದಿ ಅವರು ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ ರೂ.15 ಲಕ್ಷ ಹಾಕ್ತೀವಿ ಅಂದರು. ವಿದೇಶದಿಂದ ಕಪ್ಪು ಹಣ ಬಂತಾ? ನಿಮ್ಮ ಖಾತೆಗೆ ಹಾಕಿದ್ರಾ? ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ ಸೇರಿ ಹತ್ತಾರು ಭಾಗ್ಯಗಳು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತೀ ತಿಂಗಳು ಕೊಟ್ಟ ಮಾತಿನಂತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿರುವವರು ನಾವು. ಉಚಿತ ಬಸ್, ಉಚಿತ ವಿದ್ಯುತ್ ಕೊಡುತ್ತಿರುವವರು ನಾವು. ತಿಂಗಳಿಗೆ 2 ಸಾವಿರ ಪ್ರತೀ ಮಹಿಳೆಯ ಖಾತೆಗೆ ಹಾಕುತ್ತಿರುವವರು ನಾವು, ನಾವು ಮಾಡಿದ ಕೆಲಸಕ್ಕೆ ಲೋಕಸಭೆ ಚುನಾವಣೆಯಲ್ಲಿ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಗೌರವ ತಂದುಕೊಟ್ಟವರು ನಾವು. ಇದನ್ನು ಜನರು ತಮ್ಮ ಹೃದಯಕ್ಕೆ ಕೇಳಿಕೊಂಡು ಯಾರಿಗೆ ಮತ ಹಾಕಬೇಕು ಎಂದು ತೀರ್ಮಾನಿಸಬೇಕು ಎಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಲ್ಲಾ ಕಾರ್ಯಕ್ರಮಗಳನ್ನೂ ಬಿಜೆಪಿ ನಾಯಕರು ಬಿಟ್ಟಿಭಾಗ್ಯ ಎಂದು ವಿರೋಧಿಸುತ್ತಾರೆ, ಫಲಾನುಭವಿಗಳನ್ನು ಹೀನ ಮಾತುಗಳಿಂದ ಅವಮಾನಿಸುತ್ತಾರೆ. ನಿಮ್ಮನ್ನೇ ಅವಮಾನಿಸುವ ಬಿಜೆಪಿಗೆ ನಿಮ್ಮ ಅಮೂಲ್ಯ ಮತ ನೀಡುತ್ತೀರ? ನಿಮ್ಮ ಮತಕ್ಕೆ ಅವರು ಅರ್ಹರಿದ್ದಾರ? ಎಂದು ಸಿಎಂ ಕೇಳಿದ್ದಾರೆ.