ಬೆಂಗಳೂರು : ಕೆಎಸ್ ಆರ್ ಟಿಸಿ (ಸರ್ಕಾರಿ ಬಸ್) ಬಸ್ ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಂಡಕ್ಟರ್ ಸೊಂಟ ಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ರಾಯಚೂರು ನಗರ ಘಟಕದ ಕಂಡಕ್ಟರ್ ಲಕ್ಷ್ಮೀಕಾಂತ್ ರೆಡ್ಡಿ ಬಸ್ ನಲ್ಲಿ ಲೈಟ್ ಆಫ್ ಮಾಡಿ ಕಿರುಕುಳ ನೀಡಿದ್ದಾನೆ. ಡ್ರೈವರ್ ಸೀಟ್ ಹಿಂಬದಿಯಲ್ಲಿ ಕುಳಿತು ಮಹಿಳೆ ಪ್ರಯಾಣ ಮಾಡುತ್ತಿದ್ದರು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಂಡಕ್ಟರ್ ಮಹಿಳೆಯ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಫ್ರೀ ಟಿಕೆಟ್ ಬೇಕಾದರೆ ನನ್ನ ಜೊತೆ ಸಹಕರಿಸು, ಇಲ್ಲದಿದ್ರೆ ಫೈನ್ ಹಾಕ್ತೀನಿ ಎಂದು ಹೆದರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಂಡಕ್ಟರ್ ಮಾತ್ರ ನಾನು ಕಿರುಕುಳ ನೀಡಿಲ್ಲ ಎಂದು ಮಹಿಳೆಯ ಆರೋಪವನ್ನು ಅಲ್ಲಗೆಳೆದಿದ್ದಾನೆ. ಕಂಡಕ್ಟರ್ ವರ್ತನೆಗೆ ಜನರು ಆಕ್ರೋಶ ಹೊರ ಹಾಕಿದ್ದು, ಇಂತಹ ಕಂಡಕ್ಟರ್ ಗಳು ಇದ್ರೆ ಬಸ್ ನಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಪ್ರಯಾಣಿಸುವುದು ಹೇಗೆ..? ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ…ಇದರಿಂದ ಬೇರೆಯವರಿಗೂ ಪಾಠ ಆಗುತ್ತದೆ..! ಎಂದು ಆಗ್ರಹಿಸಿದ್ದಾರೆ.