ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ 2024ರಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಜಾರಿಗೆ ತಂದಿದೆ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಕಳೆದ ತಿಂಗಳು ನಡೆದ ಬಿಸಿನೆಸ್ ಶೃಂಗಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಮಸೂದೆ ಸದನದಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದು ಅಧಿಸೂಚನೆಯನ್ನು ಹೊರಡಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿದೇಶಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡಲಾಗುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವು ನೆರೆಯ ದೇಶಗಳ ವ್ಯಕ್ತಿಗಳಿಗೆ ಪೌರತ್ವ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ನಿಬಂಧನೆಗಳನ್ನು ಒಳಗೊಳ್ಳುತ್ತದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಸರ್ಕಾರದ ನಿರ್ಧಾರವು ಪೌರತ್ವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಚುನಾವಣಾ ಭರವಸೆಗಳನ್ನು ಈಡೇರಿಸಲು ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.