ಮಂಡ್ಯ: 2022ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬಿಜೆಪಿ ಕಾರ್ಯರ್ತನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಮೂವರನ್ನು ಬಂಧಿಸಿರುವ ಬೆನ್ನಲ್ಲೇ 2022ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ರವಿಯನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಇಂದು ರವಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು, ವಿಚಾರಣೆ ನಡೆಸಿದ ಕೋರ್ಟ್ ರವಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ 2022ರಲ್ಲಿ ಮಂಡ್ಯದ ಸಂಜಯ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತ ರುಪಾಕಿಸ್ತಾನ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದರು. ಘೋಷಣೆ ಕೂಗುವ ಬರದಲ್ಲಿ ಕಾರ್ಯಕರ್ತ ರವಿ ಎನ್ನುವವರು ಗೊಂದಲದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಎರಡು ವರ್ಷಗಳ ಬಳಿಕ ಈ ಘಟನೆ ಸಂಬಂಧ ಕಾಂಗ್ರೆಸ್ ರವಿ ಮೇಲೆ ದೂರು ಸಲ್ಲಿಸಿತ್ತು. ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ರವಿಯನ್ನು ಪೊಲೀಸರು ಬಂಧಿಸಿದ್ದರು.