ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ವೀಡಿಯೋ ಸಂವಾದದ ಪ್ರಮುಖ ಅಂಶಗಳು.
ಬರ ಪರಿಸ್ಥಿತಿ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಸಭೆಯ ಮುಖ್ಯಾಂಶಗಳು:
ಸದ್ಯಕ್ಕೆ ಮೇವಿನ ಅಭಾವ ಅಷ್ಟಾಗಿ ಎದುರಾಗಿಲ್ಲ. ಚಿತ್ರದುರ್ಗದಲ್ಲಿ ಮಾತ್ರ ಸಮಸ್ಯೆ ಕಂಡುಬಂದಿದ್ದು, ಈಗಾಗಲೇ ಮೂರು ಗೋ-ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಸಮಸ್ಯೆ ಇದ್ದರೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿಯಾದರೂ ಕ್ರಮ ವಹಿಸಲು ಸೂಚಿಸಲಾಗಿದೆ. ಮೇವು ಖರೀದಿಗೆ ಮುಂಚಿತವಾಗಿಯೇ ಟೆಂಡರ್ ಕರೆಯಲಾಗಿದೆ.
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಮಾತ್ರ ನೀರಿನ ಮಟ್ಟ ಕಡಿಮೆಯಾಗಿದೆ. ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿರುವವರಿಗೆ ನೀರಿನ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಗಾರು ಸರಿಯಾದ ಸಮಯಕ್ಕೆ ಪ್ರಾರಂಭವಾಗುವ ಬಗ್ಗೆ ಅಂದಾಜಿಸಲಾಗಿದೆ. ಆದರೂ ಜೂನ್ ಅಂತ್ಯದವರೆಗೆ ಸಂಕಷ್ಟ ಎಂದು ಪರಿಗಣಿಸಿಯೇ ಕಾರ್ಯನಿರ್ವಹಿಸಬೇಕಿದೆ.
1.78 ಟಿಎಂಸಿ ನೀರು ತುಂಗಭದ್ರಾದಲ್ಲಿ ಲಭ್ಯವಿದ್ದು ಜೂನ್ ಅಂತ್ಯದವರೆಗೆ ಇದರಲ್ಲಿಯೇ ನಿರ್ವಹಣೆ ಮಾಡಬೇಕಿದೆ. ವಾರಕ್ಕೊಮ್ಮೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಬೇಕು. ನಾರಾಯಣಪುರ, ಆಲಮಟ್ಟಿ, ಮಲಪ್ರಭಾ, ಘಟಪ್ರಭಾ, ಕಾವೇರಿ ಕಣಿವೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.
ವಿಜಯನಗರ, ಕೊಪ್ಪಳ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಲಾಶಯಗಳ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ.
ವಿಜಯನಗರ ಜಿಲ್ಲೆಯ ಮೂರು ಪಟ್ಟಣಗಳು ಹಾಗೂ 40 ಪಂಚಾಯಿತಿಗಳಿಗೆ ನೀರು ಪೂರೈಕೆಗೆ 0.1 ಟಿಎಂಸಿ ನೀರು ಬಿಡುಗಡೆ ಮಾಡುವ ಕುರಿತು ಕ್ರಮ ವಹಿಸುವಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ
ಹಾವೇರಿ ಜಿಲ್ಲೆಯ ನಗರ ನೀರು ಸಮಸ್ಯೆ ಬಗೆಹರಿಸಲು ಕೆ.ಯು.ಐ.ಡಿ.ಎಫ್ ನಿಂದ ಹಣ ಬಳಕೆ ಮಾಡಲು ಸೂಚನೆ.
ಹಾಸನದಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಗಳಿಗೆ ಯೋಜನೆ ಹಾಕಿಕೊಳ್ಳಬೇಕು ಎಂದು ನಿರ್ದೇಶನ
ನರೇಗಾದಡಿ ರಾಜ್ಯಕ್ಕೆ ನೀಡಿದ್ದ ಮಾನವ ದಿನಗಳು ಸಂಪೂರ್ಣಗೊಂಡಿದೆ. ಕೇಂದ್ರ ಸರ್ಕಾರದಿಂದ 730 ಕೋಟಿ ರೂ.ಗಳು ಬರಬೇಕಿದ್ದು, ಇನ್ನೂ ಬಿಡುಗಡೆಯಾಗಿಲ್ಲ. 1,400 ಕೋಟಿ ಕೆಲಸ ನಿರ್ವಹಿಸಿದ ಮೊತ್ತ ಬರಬೇಕಿದೆ.
24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಪ್ರಥಮ ಆದ್ಯತೆ ನೀಡಬೇಕು. ನಂತರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಲು ಆದ್ಯತೆ ನೀಡಬೇಕು.
ಎಸ್.ಡಿ.ಆರ್.ಎಫ್ ಅಡಿ ಕೊಳವೆಬಾವಿ ದುರಸ್ತಿಗೆ ಅನುದಾನ ಲಭ್ಯವಿದೆ. ಅನಿವಾರ್ಯ ಸಂದರ್ಭದಲ್ಲಿ ಕೊಳವೆಬಾವಿ ಕೊರೆಸಲು ಅವಕಾಶವಿದೆ. ಟ್ಯಾಂಕರ್ಗೆ ಮುಂಚಿತವಾಗಿಯೇ ಟೆಂಡರ್ ಕರೆದು ಸಿದ್ಧವಾಗಿರಬೇಕು.
ಎಲ್ಲಾ ಟ್ಯಾಂಕರುಗಳನ್ನು ನೋಂದಾಯಿಸಲು ಸೂಚಿಸಲಾಗಿದೆ. ಬೆಂಗಳೂರು ನಗರಕ್ಕೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಬಿಬಿಎಂಪಿ ವತಿಯಿಂದ ಬೋರ್ವೆಲ್ ನೀರು ಒದಗಿಸಲಾಗುತ್ತಿದೆ.
ಕಾವೇರಿ ಐದನೇ ಹಂತದ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಹಾಗೂ ಪ್ರಕಟವಾಗುವ ಕುಡಿಯುವ ನೀರಿನ ಸಮಸ್ಯೆ ಕುರಿತ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಯಿತು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಮಾಡುವಂತೆ ಸೂಚನೆ ನೀಡಲಾಗಿದೆ.