ಬೆಂಗಳೂರು : ಕರ್ನಾಟಕದಲ್ಲಿ ಈ ಸಲ ಬಾರಿ ಪ್ರಮಾಣದ ಬರ ಇದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶಿಸಿದರು.
ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಿಂದ ವೀಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅವರು ಮಾತನಾಡಿದರು.
ಕರ್ನಾಟಕದಲ್ಲಿ ಪ್ರಖರವಾದ ಬರಗಾಲ ಪರಿಸ್ಥಿತಿ ಕಾಣುತ್ತಿದೆ. ಮುಂಗಾರು ಮಳೆ ವಿಫಲವಾಗಿ, ರೈತರು ಬೆಳೆದಿದ್ದ ಸುಮಾರು 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಇನ್ನೂ ಮಾರ್ಚ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಎದುರಿಸಬೇಕು. ಮೈಸೂರು ಭಾಗದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ಪೂರ್ವ ಮಳೆ ಬರುವ ಸಾಧ್ಯತೆ ಇದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಬರುತ್ತದೆ ಎಂಬ ನಿರೀಕ್ಷೆ ಇಲ್ಲ. ಅದಕ್ಕಾಗಿ ಅಧಿಕಾರಿಗಳು ಈಗಿನ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಮುಂದಿನ ಪರಿಸ್ಥಿಯನ್ನು ಸಮಸ್ಯೆಗಳಿಲ್ಲದೆ ನಿಭಾಯಿಸಲು ಎರಡು ಪ್ರಕಾರದ ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಬೇಕೆಂದು ಅವರು ಸೂಚಿಸಿದರು.
ಜನರಿಗೆ ತೊಂದರೆ ಆದರೆ ಆಯಾ ಜಿಲ್ಲೆಯ ಡಿಸಿ,ಎಸಿ ಮತ್ತು ತಹಸಿಲ್ದಾರರನ್ನು ಜವಾಬ್ದರರನ್ನಾಗಿ ಮಾಡುತ್ತೇನೆ. ಅವರು ಎಚ್ಚರಿಕೆ ವಹಿಸಬೇಕು.ಕುಡಿಯುವ ನೀರಿನ ಕೊರತೆ ಆಗಬಾರದು. ಜನ ಕೆಲಸ ಸಿಕ್ಕಿಲ್ಲ ಅಂತಾ ಗುಳೆ ಹೋಗಬಾರದು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು, ಸಿಇಓ ಗಳು ತಮ್ಮ ಜಿಲ್ಲೆಯ ತಹಶಿಲ್ದಾರ, ಆರ್ ಐ, ವಿ.ಎ ಮತ್ತು ಪಿಡಿಓ ಗಳ ಜೋತೆ ಸಭೆ ಜರುಗಿಸಬೇಕು. ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ವಿಪತ್ತನ್ನು ಸಮರ್ಥವಾಗಿ ನಿರ್ವಹಿಸಲು ಜನರ ಸಹಕಾರ, ಅವರ ಪಾಲ್ಗೋಳ್ಳುವಿಕೆ ಮುಖ್ಯ. ಅದಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ತಮ್ಮ ಡಿಸಿ ಕಚೇರಿಯಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರದಂತೆ ಎಲ್ಲ ಜಿಲ್ಲೆಗಳಲ್ಲಯೂ ತಕ್ಷಣ ಜನರ ನೆರವಿಗೆ ಬರಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು
ಮತ್ತು ಪ್ರತಿ ತಾಲೂಕಿನಲ್ಲಿ ಕಂಟ್ರೊಲ್ ರೂಮ್ ಆರಂಭಿಸಿ, ದಿನದ 24 ಗಂಟೆ ಜನರ ಅಹವಾಲು ಆಲಿಸುವ ಮತ್ತು ಪರಿಹಾರ ಕೈಗೊಳ್ಳುವ ಕೆಲಸವಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಕ್ರಮವಹಿಸಿ, ಜಿಲ್ಲೆಯಿಂದ ಮೇವು ಹೊರ ಹೋಗದಂತೆ ಆದೇಶಿಸಿ. ಕೃಷಿ, ಕುಡಿಯುವ ನೀರಿಗೆ ತಡೆರಹಿತ ವಿದ್ಯುತ್ ನೀಡಬೇಕು ಮತ್ತು ಕುಡಿಯುವ ನೀರಿಗಾಗಿ ಹೊಸ ಬೋರವೇಲ್ ಕೊರೆಸಿದಾಗ ತಕ್ಷಣ ವಿದ್ಯತ್ ಸಂಪರ್ಕ ಕೊಡಲು ಕೆಪಿಟಿಸಿಎಲ್ ಕ್ರಮವಹಿಸಬೇಕು. ದಾಖಲಾತಿ, ಅನುಮತಿ ನೆಪದಲ್ಲಿ ವಿಳಂಬ ಮಾಡಿದರೆ ಕರ್ತವ್ಯ ಲೋಪವೆಂದು ತಿಳಿದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಬರಗಾಲ ಪರಿಸ್ಥಿಯಲ್ಲಿ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಖರ್ಚಿಗೆ ಈ ಯೋಜನೆಗಳಿಂದ ಸ್ವಲ್ಪ ಹಣ ಸೀಗುತ್ತಿದೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ಹಣ ಸೀಗುತ್ತಿದೆ. ರಾಜ್ಯದ 4.5 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನೆ ತಲುಪುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಿಲ್ಲೆಗಳಲ್ಲಿ ಸಮರ್ಥವಾಗಿ ವಿಪತ್ತು ನಿರ್ವಹಿಸಲು ಅಗತ್ಯದಷ್ಟು ಅನುದಾನವನ್ನು ಎಲ್ಲ ಡಿಸಿ, ತಹಸಿಲ್ದಾರಗಳಿಗೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಹೊಸದಾಗಿ ಬೋರವೇಲ್ ಕೊರೆಸಲು ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ ರೂ.2 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸಂವಾದದಲ್ಲಿ ತಿಳಿಸಿದರು.
ಪತ್ರಿಕೆಗಳಲ್ಲಿನ ವಾಚಕರ ವಾಣಿ,ಓದುಗರ ಪತ್ರಗಳಿಗೆ ಉತ್ತರಿಸಿ: ಮುಖ್ಯಮಂತ್ರಿಗಳ ನಿರ್ದೇಶನ
ಸರಕಾರ,ಆಡಳಿತ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಸಂಪರ್ಕ ಸೇತುವೆ ಆಗಿರುವ ಪತ್ರಿಕೆಗಳಲ್ಲಿ ವಾರಕೊಮ್ಮೆ ಪ್ರಕಟವಾಗುವ ವಾಚಕರ ವಾಣಿ, ಓದುಗರ ಪತ್ರ, ಸಾರ್ವಜನಿಕರ ಅಹವಾಲು, ಜನಸ್ಪಂದನ ವಿಭಾಗಗಳಲ್ಲಿನ ಸಮಸ್ಯೆ ಅಹವಾಲು, ಬೇಡಿಕೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವ ರೂಢಿ ಬೆಳೆಸಿಕೊಳ್ಳಬೇಕು.
ಇದರಿಂದ ಸರಕಾರ, ಆಡಳಿತದ ಮೇಲೆ ಜನರ ವಿಶ್ವಾಸರ್ಹತೆ ಹೆಚ್ವುತ್ತದೆ. ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಕುಡಿಯುವ ನೀರು, ಸ್ವಚ್ಚತೆ, ನಿರಪಯುಪಕ್ತ ಕಟ್ಟಡ, ಹಾಳಾದ ರಸ್ತೆ, ವಿದ್ಯತ್ ವ್ಯವಸ್ಥೆ ಕುರಿತು ಓದುಗರ ಅಭಿಪ್ರಾಯಗಳು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಬಗ್ಗೆ ಸೂಕ್ತ ಕ್ರಮವಹಿಸಿ, ಆಯಾ ಅಧಿಕಾರಿಗಳ ಹಂತದಲ್ಲಿ ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.