ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ಬ್ರೆಜಿಲ್ ಪ್ರವಾಸಿ ಮಹಿಳೆ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ನವನೀತ್ ಕುಮಾರ್ ಅವರ ಪೀಠವು ಸೋಮವಾರ ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಮುಖ್ಯ ಕಾರ್ಯದರ್ಶಿ ಮತ್ತು ದುಮ್ಕಾದ ಪೊಲೀಸ್ ವರಿಷ್ಠಾಧಿಕಾರಿಯ ಪ್ರತಿಕ್ರಿಯೆಯನ್ನು ಕೇಳಿದೆ. ಜಾರ್ಖಂಡ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ರಿತು ಕುಮಾರ್ ಸೋಮವಾರ ಬೆಳಿಗ್ಗೆ ಘಟನೆಯ ಬಗ್ಗೆ ವಿವಿಧ ಸುದ್ದಿ ವರದಿಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ವಿದೇಶಿ ಪ್ರಜೆಯ ವಿರುದ್ಧದ ಅಪರಾಧಗಳು ಗಂಭೀರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಾಮಗಳನ್ನು ಬೀರಬಹುದು ಮತ್ತು ದೇಶದ ಪ್ರವಾಸೋದ್ಯಮ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಒತ್ತಿಹೇಳಿದೆ.
ಮಾರ್ಚ್ 1 ರಂದು ಈ ಘಟನೆ ನಡೆದಿದ್ದು, ಬೈಕ್ ಪ್ರವಾಸದಲ್ಲಿದ್ದ ಬ್ರೆಜಿಲ್ ಮಹಿಳೆ ಮತ್ತು ಆಕೆಯ ಪತಿ ರಾತ್ರಿ ದುಮ್ಕಾದಲ್ಲಿ ತಂಗಿದ್ದರು. ಈ ವೇಳೆ ಏಳು ಜನರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಪತಿಯನ್ನು ಥಳಿಸಿದ್ದಾರೆ ಎಂದು ವಿದೇಶಿ ಮಹಿಳೆ ಆರೋಪಿಸಿದ್ದರು.