ಧಾರವಾಡ : ಸರಕಾರಿ ನೌಕರರು ಸಮಾಜದಲ್ಲಿ ಪ್ರಭಾವಯುತ ಸ್ಥಾನ, ವ್ಯಕ್ತಿತ್ವ ಹೊಂದಿದ್ದು, ಜನರಲ್ಲಿ ಹೆಚ್ಚು ಸಕಾರಾತ್ಮಕತೆ ಬೆಳೆಸಲು ಪ್ರಯತ್ನಿಸಬೇಕು. ರಾಜ್ಯ ಸರಕಾರ ನುಡಿದಂತೆ ನಡೆದಿದ್ದು, ರಾಜ್ಯ ಸರಕಾರಿ ನೌಕರರಿಗೆ ನೀಡಿದ್ದ, ಓಪಿಎಸ್ ಜಾರಿಗೆ ನಾವು ಬದ್ಧರಾಗಿದ್ದೇವೆ. ಅದಕ್ಕೆ ಕಾಲವಕಾಶ ಅಗತ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯ ಸರಕಾರಿ ನೌಕರರ ಜಿಲ್ಲಾ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿದರು.
ಪ್ರತಿದಿನ ಒತ್ತಡಗಳಲ್ಲಿ ಕೆಲಸ ಮಾಡುವ ಸರಕಾರಿ ನೌಕರರು ಪ್ರತಿದಿನವೂ ಬಿಡುವು ಮಾಡಿಕೊಂಡು ವ್ಯಾಯಾಮ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಎಲ್ಲರಿಗೂ ಆರೋಗ್ಯ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ಅತೀ ಮುಖ್ಯವಾಗಿರುವುದರಿಂದ ವ್ಯಾಯಾಮ, ಕ್ರೀಡೆಗಳ ಮೂಲಕ ಅದನ್ನು ಸದೃಢವಾಗಿ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದರಿಯಾಗಿದೆ ಎಂದು ಅವರು ಹೇಳಿದರು.
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಜೀವನ ಶೈಲಿ ಮುಖ್ಯವಾಗಿದೆ. ಆಹಾರ, ಓದು, ಸಂಗೀತ, ವಿಹಾರದಂತ ಹವ್ಯಾಸ ಬೆಳೆಸಿಕೊಳ್ಳಬೇಕು. ಮತ್ತು ತಮ್ಮ ಮಕ್ಕಳಲ್ಲಿ ರಾಷ್ಟಭಕ್ತಿ, ನೈತಿಕ ಶಿಕ್ಷಣ ಮೂಡಿಸುವ ಕಾರ್ಯವಾಗಬೇಕು ಎಂದು ಸಚಿವರು ತಿಳಿಸಿದರು.