ಬೆಂಗಳೂರು : ರಾಜ್ಯಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ ಎಂದು ಹೇಳಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅಜಯ್ ಮಕನ್ ಗೆ 47, ಸೈಯದ್ ನಾಸೆರ್ ಹುಸೇನ್ ಗೆ 47 ಹಾಗೂ ಜಿ.ಸಿ ಚಂದ್ರಶೇಖರ್ ಗೆ 45 ಮತಗಳು ಬಿದ್ದಿವೆ. ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆಗೆ 48 ಓಟು ಬಿದ್ದಿದೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 35 ಮತಗಳು ಸಿಕ್ಕಿವೆ ಎನ್ನಲಾಗಿದೆ.
ರಾಜ್ಯಸಭೆ ಚುನಾವಣೆಯ ಮತದಾನದ ಅವಧಿ ಸಂಜೆ 4 ಗಂಟೆಗೆ ಮುಕ್ತಾಯವಾಗಿದ್ದು, 222 ಮಂದಿ ಶಾಸಕರು ಮತದಾನ ಮಾಡಿದ್ದಾರೆ.ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 6 ರಲ್ಲಿ ಮತದಾನ ನಡೆದಿತ್ತು, 223 ಮತಗಳ ಪೈಕಿ 222 ಮಂದಿ ಮತದಾನ ಮಾಡಿದ್ದಾರೆ. ಶಾಸಕ ಶಿವರಾಜ್ ಹೆಬ್ಬಾರ್ ಮಾತ್ರ ಮತದಾನ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ.ಕಾಂಗ್ರೆಸ್ ನ 137 ಶಾಸಕರು, ಬಿಜೆಪಿಯ 65, ಜೆಡಿಎಸ್ ನ 19 ಮಂದಿ ಹಾಗೂ ಪಕ್ಷೇತರರ ನಾಲ್ವರು ಮಂದಿ ಶಾಸಕರು ಮತ ಚಲಾಯಿಸಿದ್ದಾರೆ.