ಬೆಂಗಳೂರು : ಬೆಂಗಳೂರಿನಲ್ಲಿ ನಿಷೇಧಿತ ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್, ಹೆಚ್ಎಎಲ್ ಹಾಗೂ ಕೆ.ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 12.5 ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ಹಾಗೂ ಇನ್ನಿತರ ವಸ್ತುಗಳನ್ನು ಸೀಜ್ ಮಾಡಲಾಗಿದೆ. 710 ಹುಕ್ಕಾ ಫ್ಲೇವರ್, 36 ಹುಕ್ಕಾ ಪ್ಯಾಕೇಟ್, 28 ಬಾಕ್ಸ್ ಫಾಯಿಲ್ ಪೇಪರ್, 19 ಪಿಲ್ಟರ್ಗಳು ಜೊತೆಗೆ 25 ಹುಕ್ಕಾ ಪೈಪ್ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಧಾನಸಭೆಯಲ್ಲಿ ಇತ್ತೀಚೆಗೆ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಕೋಟ್ಪಾ ಕಾಯ್ದೆಗೆ ಅಂಗೀಕಾರ ಸಿಕ್ಕಿದ್ದು, ಈ ಮೂಲಕ ರಾಜ್ಯದಾದ್ಯಂತ ಎಲ್ಲಾ ಹುಕ್ಕಾ ಬಾರ್ ಗಳನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಹುಕ್ಕಾಬಾರ್ ನಿಷೇಧಿಸಲಾಗಿದ್ದು, ಇದಕ್ಕೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಸರ್ಕಾರ ಹುಕ್ಕಾಬಾರ್ ನಿಷೇಧ ಮಾಡಿದ್ರೂ ಕೂಡ ಹಲವು ಕಡೆ ಎಗ್ಗಿಲ್ಲದೇ ಹುಕ್ಕಾಬಾರ್ ಗಳನ್ನು ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದೆ.