ಬೆಂಗಳೂರು : ನಮಗೆ ದೇವಾಲಯದ ತೀರ್ಥಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಾರಿಗೆ ಬಸ್ ಗಳನ್ನು ವ್ಯವಸ್ಥೆ ಮಾಡಿ ಎಂದು 8 ನೇ ತರಗತಿ ವಿದ್ಯಾರ್ಥಿನಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.
ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿನ ಹೋಗಲು ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಮಗೆ ಬಸ್ ವ್ಯವಸ್ಥೆ ಮಾಡುವಂತೆ ಸಿಎಂ ಸಿದ್ದರಾಮಯ್ಯ, ಸಚಿವ ರಾಮಲಿಂಗ ರೆಡ್ಡಿ, ಮಧು ಬಂಗಾರಪ್ಪಗೂ ಪತ್ರ ಬರೆದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.
ವಿದ್ಯಾರ್ಥಿನಿಯು ಪತ್ರದಲ್ಲಿ, ನಾನು ಕುಮಾರಿ ವಿ.ವೈ. ಹರ್ಷಿಣಿ, 8 ನೇ ತರಗತಿ ವಿದ್ಯಾರ್ಥಿನಿ. ನಾಣು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನಾನು ಮತ್ತು ನನ್ನ ತಾಯಿ ಹಲವು ಬಾರಿ ತಮ್ಮ ಸಂಸ್ಥೆಯ ಅಧಿಕಾರಿಗಳಿಗೆ ತಾವರೆಕೆರೆಯಿಂದ ಮಾಗಡಿ ರಸ್ತೆಯ ಮುಖಾಂತರ ಶ್ರೀನಗರ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಬಸ್ ಬಿಡಬೇಕೆಂದು ಮನವಿ ಮಾಡಿಕೊಂಡಿರುತ್ತೇವೆ. ಈ ಪತ್ರಕ್ಕೆ ಸಂಸ್ಥೆಯ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಆದರೆ, ಪ್ರತಿ ಗುರುವಾರ ಹಾಗೂ ಭಾನುವಾರ ಸುಮ್ಮನಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ರಾಯರ ಕಾಮದೇನು ದೇವಾಲಯಕ್ಕೆ ಪ್ರತಿಗಂಟೆಗೆ ಬಸ್ ಬಿಡಲಾಗುತ್ತಿದೆ.
ನಮಗೆ ದೇವಾಲಯದ ತೀರ್ಥಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆಯ ಸಾರಿಗೆ ವಾಹನಗಳು ಬೇಕಾಗಿರುತ್ತದೆ. ಈ ದೇಶದ ರಾಷ್ಟ್ರಪತಿ ಮಹಿಳೆಯಾಗಿರುತ್ತಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸುರಕ್ಷಿತ ಸಿಗುವಂತೆ ಮಾಡಿರುವುದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದವಾಗಿರುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲೂಕು ಹಳ್ಳಿಯ ಶಾಲಾ ಮಕ್ಕಳಿಗೆ ವಿಶೇಷ ಸಾರಿಗೆ ಬಸ್ಗಳನ್ನು ಆರಂಭಿಸಬೇಕಾಗಿ ತಮ್ಮಲ್ಲಿ ಕಳಕಳಿಯವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹರ್ಷಿಣಿ ಪತ್ರದಲ್ಲಿ ಬರೆದಿದ್ದಾಳೆ.