ಮಂಡ್ಯ : ನನಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ನಾನು ನಿರಂತರವಾಗಿ ಹೋರಾಡಿದ್ದೇನೆ, ಗಣಿಗಾರಿಕೆ ವಿರುದ್ಧ ಹೋರಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಬರುತ್ತಿದೆ. ಕೆ ಆರ್ ಎಸ್ ಸುತ್ತಾಮುತ್ತಾ ಗಣಿಗಾರಿಕೆ ನಡೆಸಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದ್ದರೂ, ಕ್ಯಾರೇ ಎನ್ನದೇ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ.
ಅಕ್ರಮದ ವಿರುದ್ಧ ಹೋರಾಡಿದ ಪ್ರತಿಫಲವಾಗಿ ನನಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ(ಕೆಆರ್ಎಸ್) ಸುತ್ತಲಿನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಇತರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಡೆಸದಂತೆ ನಿಷೇಧಿಸಿ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶದಂತೆ ಗಣಿಗಾರಿಕೆ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು, ಹೂಳು ತೆಗೆಯುವುದು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿತ್ತು.