ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 15 ರಿಂದ ಕರಗ ಆರಂಭವಾಗಲಿದೆ.
ಹೌದು, ಏಪ್ರಿಲ್ 15 ರಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಆರಂಭವಾಗಲಿದ್ದು, ಏ. 23 ರವರೆಗೆ ನಡೆಯಲಿದೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಹೊರಲಿದ್ದಾರೆ. ಲಕ್ಷಾಂತರ ಮಂದಿ ಭಕ್ತರು ಕರಗವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿಯ ಆರಾಧನೆಯಾಗಿ ಆಚರಿಸುವ ಕರಗ ಮಹೋತ್ಸವ ಬಹಳ ಪ್ರಸಿದ್ದಿ ಪಡೆದಿದೆ. ಈ ಸಂದರ್ಭದಲ್ಲಿಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ (ತಿಗಳ ಕ್ಷತ್ರಿಯ) ಜನಾಂಗದವರು ಕುಲದೇವತೆಯಾಗಿ ಆರಾಧಿಧಿಧಿಸುತ್ತಾರೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಧಿವತ್ತಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ ‘ಕುಂಭ’ ಎಂಬ ಅರ್ಥ ಇದೆ. ವಹ್ನಿಕುಲ ಕ್ಷತ್ರಿಯ ಜನಾಂಗದವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆ ಒಪ್ಪಿಸುವ ಆಚರಣೆ. ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರ ಹುಣ್ಣಿಮೆಯಂದು ಕರಗ ಆಚರಣೆ ನಡೆಯುತ್ತದೆ. ವಹ್ನಿಕುಲ ಕ್ಷತ್ರಿಯರ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ.