ಬೆಂಗಳೂರು : ರಾಜ್ಯದಲ್ಲಿ ಮೊದಲ ಬಾರಿಗೆ ʼನವಜಾತ ಶಿಶು ತುರ್ತು ಸೇವೆ ಆಂಬ್ಯುಲೆನ್ಸ್ʼಗೆ ಚಾಲನೆ ನೀಡುವ ಮೂಲಕ ಶಿಶುಗಳ ಮರಣ ತಗ್ಗಿಸಲು ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ.
ಸದ್ಯ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈ ಆಂಬುಲೆನ್ಸ್’ಗಳು ಸೇವೆ ಒದಗಿಸಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಈ ಮೂಲಕ ನವಜಾತ ಮಕ್ಕಳ ಜೀವಗಳನ್ನು ರಕ್ಷಿಸುವಲ್ಲಿ ಆರೋಗ್ಯ ಇಲಾಖೆಯು ಕಾರ್ಯಪ್ರವೃತ್ತವಾಗಿದೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯ ಈ ಹೊಸ ಆಂಬ್ಯುಲೆನ್ಸ್ ಸೇವೆಯಿಂದ ಅವಧಿಪೂರ್ವವಾಗಿ ಜನಿಸುವ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯಬಹುದು ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗಗಳಲ್ಲಿ ʼನವಜಾತ ಶಿಶು ತುರ್ತು ಸೇವೆ ಆಂಬ್ಯುಲೆನ್ಸ್ʼ ಗಳನ್ನು ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ವೆಂಟಿಲೇಟರ್, ಇನ್ಕ್ಯುಬೇಟರ್, ವಿಶೇಷ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ, ಸುಧಾರಿತ ಜೀವ ರಕ್ಷಕ ಸಾಧನಗಳನ್ನು ಈ ಆಂಬ್ಯುಲೆನ್ಸ್ ಒಳಗೊಂಡಿರುತ್ತದೆ. ಈ ಮೂಲಕ ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ಮಹತ್ತರ ಕಾರ್ಯಸಾಧನೆಯಾಗಲಿದೆ ಎಂದರು.