ಬೆಂಗಳೂರು : ರಾಜ್ಯದ ಜನರ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಆಶಾಕಿರಣ ಯೋಜನೆಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಜನಸಾಮಾನ್ಯರಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಅಂಧತ್ವ ಮುಕ್ತ ಸಮಾಜ ನಿರ್ಮಾಣದತ್ತ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಹಾವೇರಿಯಲ್ಲಿ ಆಶಾಕಿರಣ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದು, ಯೋಜನೆಯಡಿ ಮನೆ ಬಾಗಿಲಿಗೆ ಕಣ್ಣಿನ ಆರೋಗ್ಯ ಸೇವೆ ಸಿಗಲಿದೆ. ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದು ನೇತ್ರ ತಪಾಸಣೆ ನಡೆಸಲಿದ್ದಾರೆ. ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸಾ ಸೇವೆ ಮತ್ತು ಉಚಿತ ಕನ್ನಡಕ ವಿತರಣೆ ಮಾಡಲಿದ್ದಾರೆ.