![](https://kannadadunia.com/wp-content/uploads/2021/12/farmers-pm-kisan.png)
ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಈಗಾಗಲೇ ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾದಾರ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಹಾಗೂ ನೋಂದಾಯಿತ ಸಂಘ-ಸಂಸ್ಥೆಗಳು (ಎಫ್ಪಿಒಗಳನ್ನು ಒಳಗೊಂಡಂತೆ) ಭಾಗವಹಿಸಬಹುದಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಸಾಮಾನ್ಯ ವರ್ಗದಡಿ ಶೇ.70 ರಷ್ಟು ಸಹಾಯಧನದಲ್ಲಿ (ಗರಿಷ್ಟ ರೂ 50 ಲಕ್ಷ) ಯಂತ್ರೋಪಕರಣಗಳನ್ನು ಪಡೆಯಲು ಸಂಘ-ಸಂಸ್ಥೆಗಳಿಗೆ ಅವಕಾಶವಿದೆ. ಸಹಾಯಧನವು Credit Linked Back Ended Subsidy ಮುಖಾಂತರ ಪಾವತಿಯಾಗುತ್ತದೆ.
ಈ ಯೋಜನೆಯಡಿ ಸಹಾಯಧನ ಪಡೆದ ಸಂಸ್ಥೆಗಳು ಕಂಬೈನ್ಡ್ ಹಾರ್ವೆಸ್ಟರ್ ಹಾಗೂ ಟ್ರಾಕ್ಟರ್ ಚಾಲಿತ ಬೇಲರ್ ಅನ್ನು ಕಡ್ಡಾಯವಾಗಿ ದಾಸ್ತಾನೀಕರಿಸುವುದು ಹಾಗೂ ಇತರೆ ಕೃಷಿ ಯಂತ್ರೋಪಕರಣಗಳನ್ನು ಐಚ್ಚಿಕವಾಗಿ ಹಬ್ ನಲ್ಲಿ ದಾಸ್ತಾನೀಕರಿಸಲು ಅವಕಾಶವಿದೆ.
ಸಂಘ-ಸಂಸ್ಥೆಗಳು ಅರ್ಜಿಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು: ಸಂಸ್ಥೆ ನೋಂದಾಯಿಸಿದ ಪ್ರಮಾಣ ಪತ್ರ, ಗುರುತಿನ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ರೂ. 20 ಗಳ ಛಾಪಾ ಕಾಗದದ ಮೇಲೆ ಹಬ್ ಅನ್ನು ಪರಬಾರೆ ಮಾಡುವುದಿಲ್ಲ ವೆಂದು ಮುಚ್ಚಳಿಕೆ ಪತ್ರ, 2 ವರ್ಷಗಳ ಲೆಕ್ಕ ಪರಿಶೋದನಾ ಪತ್ರ. ಸಹಕಾರ ಸಂಘಗಳ ನಿಬಂಧನೆಯಂತೆ/ ಕಂಪನಿ ಕಾಯ್ದೆಯಡಿ ನೋಂದಾಯಿಸಿದ ಸಂಘ-ಸಂಸ್ಥೆಗಳು ಮಾತ್ರ ಅರ್ಹತೆ ಹೊಂದಿರುತ್ತಾರೆ.
ಅರ್ಜಿಯನ್ನು ಸಂಬಂದಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ/ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ, 21 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ತಿಳಿಸಿದ್ದಾರೆ.